

ಗುಂಟೂರು: ಐಎಎಸ್ ಅಧಿಕಾರಿಯೊಬ್ಬರ ಪುತ್ರಿಯೇ ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಂಗಳಗಿರಿ-ತಾಡೇಪಲ್ಲಿ ಹಿರಿಯ ಐಎಎಸ್ ಅಧಿಕಾರಿ ಮತ್ತು ಎಸ್‌ಸಿ ಕಾರ್ಪೊರೇಷನ್ ಕಾರ್ಯದರ್ಶಿ ಚಿನ್ನರಾಮ್ ಅವರ ಪುತ್ರಿ ಮಾಧುರಿ ಸಾಹಿತಿ ಬಾಯಿ (27) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಾಹವಾದ 8 ತಿಂಗಳೊಳಗೆ ಅವರು ಆತ್ಮಹತ್ಯೆಗೆ ಶರಣಾಗಿದ್ದು ಇದೀಗ ಆಂಧ್ರ ಪ್ರದೇಶದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಐಎಎಸ್ ಅಧಿಕಾರಿ ಕುಟುಂಬ ಮಗಳ ಸಾವನ್ನು ಆತ್ಮಹತ್ಯೆ ಎಂದು ಹೇಳಿದ್ದು, ಇದಕ್ಕೆ ಆಕೆಯ ಗಂಡನ ಮನೆಯವರ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ. ತಾವು ಮನೆಯಲ್ಲಿರದಿದ್ದಾಗ ಮಗಳಾದ ಮಾಧುರಿ ರೂಮಿನ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾವು ರೂಮಿನ ಬಾಗಿಲು ಒಡೆದು ನೋಡಿದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿದ್ದಳು ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮಂಗಳಗಿರಿ ಡಿಎಸ್ಪಿ ಮುರಳಿ ಕೃಷ್ಣ ಅವರು, 'ಬಿಎನ್‌ಎಸ್‌ನ ಸೆಕ್ಷನ್ 80 (ವರದಕ್ಷಿಣೆ ಸಾವುಗಳಿಗೆ ಸಂಬಂಧಿಸಿದ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಸಾಹಿತಿಬಾಯಿ ನಂದ್ಯಾಲ್ ಜಿಲ್ಲೆಯ ಬೆಟಂಚರಾಲ ಮಂಡಲದ ಬುಗ್ಗನಪಲ್ಲಿಯಲ್ಲಿರುವ ತನ್ನ ಗ್ರಾಮದ ರಾಜೇಶ್ ನಾಯ್ಡು ಅವರನ್ನು ಪ್ರೀತಿಸುತ್ತಿದ್ದರು. ಮಾರ್ಚ್ 5 ರಂದು ಓಡಿ ಹೋಗಿ ದೇವಾಲಯದಲ್ಲಿ ರಾಜೇಶ್ ನಾಯ್ಡು ಅವರನ್ನು ವಿವಾಹವಾದರು. ಬಳಿಕ ಮಾರ್ಚ್ 7 ರಂದು ಅವರ ಮತ್ತು ಅವರ ಪತಿಯ ಕುಟುಂಬಗಳಿಗೆ ಮಾಹಿತಿ ನೀಡಿದರು.
ವಿವಾಹವನ್ನು ನಂತರ ನೋಂದಾಯಿಸಲಾಯಿತು. ಆದರೆ, ಕೆಲವು ತಿಂಗಳ ಹಿಂದೆ, ಆಕೆ ತನ್ನ ಪೋಷಕರಿಗೆ ಕರೆ ಮಾಡಿ ವರದಕ್ಷಿಣೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದಳು, ನಂತರ ಆಕೆಯ ಪೋಷಕರು ಸೆಪ್ಟೆಂಬರ್ ಮೊದಲ ವಾರದಲ್ಲಿ ಆಕೆಯನ್ನು ತಮ್ಮ ಮನೆಗೆ ಕರೆತಂದರು. ಆಕೆ ಮತ್ತೆ ಗಂಡನ ಮನೆಗೆ ಹೋಗಲು ನಿರಾಕರಿಸಿದ ಕಾರಣ ಆಕೆಯನ್ನು ಪೋಷಕರು ತಮ್ಮ ಮನೆಯಲ್ಲೇ ಉಳಿಸಿಕೊಂಡರು ಎಂದು ತಿಳಿಸಿದ್ದಾರೆ ಪೊಲೀಸರು ತಿಳಿಸಿದ್ದಾರೆ.
ಮಾಧುರಿ ತಾಯಿ ಲಕ್ಷ್ಮಿಬಾಯಿ ಸಲ್ಲಿಸಿದ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಅಂತರ್ಜಾತಿ ವಿವಾಹ-ಅನುಮಾನಾಸ್ಪದ ಸಾವು
ಇನ್ನು ಮಾಧುರಿ ಮತ್ತು ರಾಜೇಶ್ ನಾಯ್ಡು ಅವರದ್ದು ಉಭಯ ಕುಟುಂಬಗಳ ಒಪ್ಪಿಗೆಯಿಂದ ನಡೆದಿಲ್ಲ. ಬದಲಿಗೆ ಅವರು ಪರಸ್ಪರ ಪ್ರೀತಿ ಓಡಿ ಹೋಗಿ ಮದುವೆಯಾಗಿದ್ದರು. ಇನ್ ಸ್ಟಾಗ್ರಾಮ್ ನಲ್ಲಿ ಇಬ್ಬರಿಗೂ ಪರಿಚಯವಾಗಿ ಅದು ಪ್ರೀತಿಗೆ ತಿರುಗಿ ಬಳಿಕ ಓಡಿ ಹೋಗಿ ದೇಗುಲದಲ್ಲಿ ಮದುವೆಯಾಗಿದ್ದರು.
ಮದುವೆಯಾದ ಮೂರು ತಿಂಗಳ ಕಾಲ ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದರೂ, ಅದರ ನಂತರ ಕಿರುಕುಳ ಪ್ರಾರಂಭವಾಯಿತು. ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ, ಮಾಧುರಿ ಎರಡು ತಿಂಗಳ ಹಿಂದೆ ತನ್ನ ಹೆತ್ತವರ ಮನೆಗೆ ಮರಳಿದರು. ಈ ಸಂದರ್ಭದಲ್ಲಿ, ಅವರು ಭಾನುವಾರ ರಾತ್ರಿ ತನ್ನ ಕೋಣೆಯ ಸ್ನಾನಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
'ಮರ್ಯಾದಾ ಹತ್ಯೆ' ಪತಿ ಪ್ರತ್ಯಾರೋಪ
ಇನ್ನು ತಮ್ಮ ವಿರುದ್ಧದ ಆರೋಪಗಳಿಗೆ ಮಾಧುರಿ ಪತಿ ರಾಜೇಶ್ ನಾಯ್ಡು ಕೂಡ ಪ್ರತ್ಯಾರೋಪ ಮಾಡಿದ್ದು, ಅವರ ಈ ವಿವಾಹಕ್ಕೆ ಮಾಧುರಿ ತಂದೆ ಐಎಎಸ್ ಅಧಿಕಾರಿ ಚಿನ್ನರಾಮುಡು ಅವರ ಒಪ್ಪಿಗೆ ಇರಲಿಲ್ಲ. ಇದೇ ಕಾರಣಕ್ಕೆ ಅವರು ಮಾಧುರಿಯನ್ನು ಮನೆಗೆ ಕರೆದೊಯ್ದು ಬೇರೆಯವರ ಜೊತೆ ಮದುವೆ ಮಾಡಲು ಮುಂದಾಗಿದ್ದರು. ಅವರೇ ಮಾಧುರಿಯನ್ನು ಕೊಂದು ಆತ್ಮಹತ್ಯೆ ರೀತಿ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಗರ್ಭಿಣಿ ಎಂದೂ ನೋಡಿರಲಿಲ್ಲ
ಮಾಧುರಿ ಗರ್ಭಿಣಿಯಾಗಿದ್ದು, ಆಕೆಯನ್ನು ಬಲವಂತವಾಗಿ ಅವರ ಮನೆಗೆ ಕರೆದೊಯ್ದರು. ಮಾಧುರಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಬೇರೊಬ್ಬರನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾರೆ ಎಂದು ಮಾಧುರಿ ನನಗೆ ಮಾಡಿದ್ದ ಮೆಸೇಜ್ ನಲ್ಲಿ ತಿಳಿಸಿದ್ದಾಳೆ.
ಮಾಧುರಿಯನ್ನು ಬೇರೊಬ್ಬರನ್ನು ಮದುವೆಯಾಗುವಂತೆ ಮಾನಸಿಕವಾಗಿ ಹಿಂಸಿಸಿ ಕೊನೆಗೆ ಆಕೆಯ ಜೀವವನ್ನೇ ತೆಗೆದುಕೊಂಡಿದ್ದಾರೆ. ಮಾಧುರಿ ಪ್ರಸ್ತುತ ಗರ್ಭಿಣಿಯಾಗಿದ್ದಾಳೆ. ಆಕೆಯದ್ದು ಆತ್ಮಹತ್ಯೆಯಲ್ಲ.. ಅದು ಕೊಲೆ. ಮರ್ಯಾದಾ ಹತ್ಯೆ ಎಂದು ರಾಜೇಶ್ ಗಂಭೀರ ಆರೋಪ ಮಾಡಿದ್ದಾರೆ.
ಅಂತಿಮ ಸಂಸ್ಕಾರ ನಾನೇ ಮಾಡುತ್ತೇನೆ
ಇದೇ ವೇಳೆ ಪತ್ನಿಯ ಶವವನ್ನು ತನಗೆ ಹಸ್ತಾಂತರಿಸಿದರೆ, ತಾವೇ ಅಂತಿಮ ವಿಧಿವಿಧಾನಗಳನ್ನು ಮಾಡುವುದಾಗಿ ರಾಜೇಶ್ ಹೇಳಿದ್ದು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರಾಜೇಶ್ ನಾಯ್ಡು ನಂದ್ಯಾಲ್ ಎಸ್ಪಿಗೆ ಅರ್ಜಿ ಸಲ್ಲಿಸಿದ್ದಾರೆ.
Advertisement