

ನವದೆಹಲಿ: ಸಂವಿಧಾನದ ಪ್ರಸ್ತಾವನೆಯಿಂದ ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ತೆಗೆದುಹಾಕಲು ಬಿಜೆಪಿ ಸಂಸದರೊಬ್ಬರು ರಾಜ್ಯಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿದ್ದಾರೆ. ಸಂವಿಧಾನದ ಪೀಠಿಕೆಯಲ್ಲಿ 'ಜಾತ್ಯತೀತ' ಮತ್ತು 'ಸಮಾಜವಾದಿ' ಪದಗಳ ಅಗತ್ಯವಿಲ್ಲ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಅವುಗಳನ್ನು ಸೇರಿಸಲಾಗಿದೆ ಎಂದು ಹೇಳಿರುವ ಬಿಜೆಪಿ ಸಂಸದ ಭೀಮ್ ಸಿಂಗ್, ಆ ಪದಗಳನ್ನು ಕಿತ್ತುಹಾಕಲು ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಿದ್ದಾರೆ.
ಶುಕ್ರವಾರ ರಾಜ್ಯಸಭೆಯಲ್ಲಿ ಸಂವಿಧಾನ (ತಿದ್ದುಪಡಿ) ಮಸೂದೆ 2025 ಮಂಡಿಸಿದ ಸಿಂಗ್, ಈ ಪದಗಳು "ಗೊಂದಲ"ವನ್ನು ಸೃಷ್ಟಿಸುತ್ತವೆ ಮತ್ತು ಮೂಲ ಸಂವಿಧಾನದ ಭಾಗವಲ್ಲ ಎಂದು ಹೇಳಿದರು.
ಸಂವಿಧಾನದ ಪೀಠಿಕೆಯನ್ನು ತಿದ್ದುಪಡಿ ಮಾಡಲು, 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ತೆಗೆದುಹಾಕಲು ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಿದ್ದೇನೆ. 1950 ರಿಂದ ಜಾರಿಯಲ್ಲಿರುವ 1949 ರಲ್ಲಿ ಅಂಗೀಕರಿಸಲ್ಪಟ್ಟ ಮೂಲ ಸಂವಿಧಾನದಲ್ಲಿ ಈ ಎರಡು ಪದಗಳು ಇರಲಿಲ್ಲ. ಇಂದಿರಾ ಗಾಂಧಿ 1976 ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ 42 ನೇ ಸಂವಿಧಾನ ತಿದ್ದುಪಡಿಯಡಿ ಸಂವಿಧಾನಕ್ಕೆ ಈ ಎರಡು ಪದಗಳನ್ನು ಸೇರಿಸಿದರು. ಆ ಸಮಯದಲ್ಲಿ ಸಂಸತ್ತಿನಲ್ಲಿ ಯಾವುದೇ ಚರ್ಚೆ ನಡೆದಿರಲಿಲ್ಲ ಎಂದು ಸಿಂಗ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
"ಎಲ್ಲ ವಿರೋಧ ಪಕ್ಷದ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಜಾರ್ಜ್ ಫರ್ನಾಂಡಿಸ್ - ಜೈಲಿನಲ್ಲಿದ್ದರು. ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗುತ್ತಿತ್ತು. ಅಂತಹ ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ಈ ಎರಡು ಪದಗಳನ್ನು ಸೇರಿಸಿದರು. ಹೀಗಾಗಿ ಇದು ನಂತರ ಸೇರಿಸಲಾದ ಪದವಾಗಿದ್ದು, ಸಂವಿಧಾನವು ಅದರ ಮೂಲ ರೂಪದಲ್ಲಿ ಉಳಿಯಬೇಕು ಎಂದು ಸಿಂಗ್ ಹೇಳಿದ್ದಾರೆ.
ಸಂವಿಧಾನ ರಚನಾ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿತ್ತು. ಕರಡು ಸಮಿತಿಯ ಅಧ್ಯಕ್ಷ ಡಾ. ಬಿ. ಆರ್. ಅಂಬೇಡ್ಕರ್ ಅವರು ಉತ್ತರ ನೀಡಿದ್ದರು. ಭಾರತದ ಸಂವಿಧಾನದ ರಚನೆಯು ದೇಶವನ್ನು ಜಾತ್ಯತೀತವಾಗಿಸುತ್ತದೆ. ಆ ಪದವನ್ನು ಸೇರಿಸುವ ಅಗತ್ಯ ಇಲ್ಲ ಎಂದು ಹೇಳಿದ್ದರು. ಸಮಾಜವಾದಿ ಪದದ ಕುರಿತು ಚರ್ಚೆ ನಡೆದಿತ್ತು. ಸಂವಿಧಾನ ರಚನಾ ಸಭೆಯು ಭವಿಷ್ಯದ ಪೀಳಿಗೆಗಳು ಒಂದೇ ರೀತಿಯ ರಾಜಕೀಯ ಮತ್ತು ಆರ್ಥಿಕ ನೀತಿಯನ್ನು ಅನುಸರಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಉತ್ತರಿಸಿದ್ದರು.
ನಾಳೆ ಯಾರಾದರೂ ಆರ್ಥಿಕ ನೀತಿಯನ್ನು ಬದಲಾಯಿಸಲು ಬಯಸಿದರೆ ಏನು? ಸಮಾಜವಾದ ಜನರ ಕಲ್ಯಾಣಕ್ಕೆ ಸಂಬಂಧಿಸಿದೆ. ಜನರ ಕಲ್ಯಾಣವನ್ನು ಹೇಗೆ ಖಚಿತಪಡಿಸಿಕೊಳ್ಳುವುದು, ಬಡತನವನ್ನು ಹೇಗೆ ಕಡಿಮೆ ಮಾಡುವುದು, ಸಂಪತ್ತನ್ನು ಹೇಗೆ ವಿತರಿಸಬೇಕು. ಈ ಎರಡು ಪದಗಳನ್ನು ಸಮಾಧಾನದ ರಾಜಕೀಯ" ಕ್ಕಾಗಿ ಸೇರಿಸಲಾಗಿದೆ ಎಂದು ಬಿಜೆಪಿ ಸಂಸದರು ಆರೋಪಿಸಿದರು.
"ಆಗಿನ ಯುಎಸ್ಎಸ್ಆರ್ ಅನ್ನು ಸಂತೋಷಪಡಿಸಲು 'ಸಮಾಜವಾದಿ' ಎಂಬ ಪದವನ್ನು ಸೇರಿಸಲಾಯಿತು ಮತ್ತು ಮುಸ್ಲಿಮರನ್ನು ಸಮಾಧಾನಪಡಿಸಲು 'ಜಾತ್ಯತೀತ' ಎಂಬ ಪದವನ್ನು ಸೇರಿಸಲಾಯಿತು. ಇದು ಅನಗತ್ಯವಾಗಿದ್ದು, ಅಗತ್ಯವಿಲ್ಲ; ಇದು ಗೊಂದಲವನ್ನು ಮಾತ್ರ ಸೃಷ್ಟಿಸುತ್ತದೆ" ಎಂದು ಅವರು ವಾದಿಸಿದ್ದಾರೆ.
Advertisement