

ಕೊಚ್ಚಿ: ನಟಿಯೊಬ್ಬರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿದ ಎರ್ನಾಕುಲಂ ಸೆಷನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಕೇರಳ ಸರ್ಕಾರ ಸೋಮವಾರ ಪ್ರಕಟಿಸಿದೆ.
ಸರ್ಕಾರ 'ಸಂತ್ರಸ್ತೆಯ ಪರವಾಗಿ ದೃಢವಾಗಿ ನಿಲ್ಲುತ್ತದೆ' ಮತ್ತು ನ್ಯಾಯವನ್ನು ದೊರಕಿಸಿಕೊಂಡಲು ಅಗತ್ಯವಿರುವ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಾನೂನು ಸಚಿವ ಪಿ ರಾಜೀವ್ ಹೇಳಿದ್ದಾರೆ.
ಈ ಸಂಬಂಧ ಇಂದು ವಿಚಾರಣೆ ನಡೆಸಿದ ಎರ್ನಾಕುಲಂ ಸೆಷನ್ಸ್ ನ್ಯಾಯಾಲಯವು, ಪ್ರಮುಖ ಆರೋಪಿ ಸುನೀಲ್ ಎನ್‌ಎಸ್ ಅಲಿಯಾಸ್ ಪಲ್ಸರ್ ಸುನಿ ಸೇರಿದಂತೆ ಒಂದರಿಂದ ಆರನೇ ಆರೋಪಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಿದೆ. ಆದರೆ, 7 ರಿಂದ 11 ರವರೆಗಿನ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಪಿತೂರಿ ಆರೋಪವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯವು ತೀರ್ಪು ನೀಡಿದ ನಂತರ ಎಂಟನೇ ಆರೋಪಿಯಾಗಿದ್ದ ನಟ ದಿಲೀಪ್ ಎಲ್ಲ ಆರೋಪಗಳಿಂದ ಮುಕ್ತರಾದರು.
ತನಿಖೆ ಮತ್ತು ಪ್ರಾಸಿಕ್ಯೂಷನ್‌ನ ಪ್ರತಿಯೊಂದು ಹಂತದಲ್ಲಿ ಸಂತ್ರಸ್ತೆ ಮತ್ತು ಪ್ರಾಸಿಕ್ಯೂಷನ್ ತಂಡದೊಂದಿಗೆ ನಿಕಟ ಸಮಾಲೋಚನೆ ನಡೆಸಲಾಯಿತು. ಆರಂಭದಿಂದಲೂ, ಸಂತ್ರಸ್ತೆಯನ್ನು ಬೆಂಬಲಿಸಲು ಮತ್ತು ನ್ಯಾಯ ವ್ಯವಸ್ಥೆಯಲ್ಲಿ ಅವರ ನಂಬಿಕೆಯನ್ನು ಎತ್ತಿಹಿಡಿಯಲು ನಾವು ಬದ್ಧರಾಗಿದ್ದೇವೆ. ನಮ್ಮ ಸಂಕಲ್ಪ ಸ್ಪಷ್ಟ ಮತ್ತು ಅಚಲವಾಗಿದೆ ಎಂದು ರಾಜೀವ್ ಹೇಳಿದರು.
ಸಂಪೂರ್ಣ ತೀರ್ಪನ್ನು ಅಧ್ಯಯನ ಮಾಡಿದ ನಂತರ ಸರ್ಕಾರ ತನ್ನ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಕುರಿತು ನಿರ್ಧರಿಸುತ್ತದೆ ಎಂದು ಅವರು ಹೇಳಿದರು.
2017ರ ಫೆಬ್ರುವರಿ 17ರಂದು ನಟ ದಿಲೀಪ್ ಅವರು ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಪೊಲೀಸರು 2017ರ ಜುಲೈ 10 ರಂದು ದಿಲೀಪ್ ಅವರನ್ನು ಬಂಧಿಸಿದ್ದರು. ಬಳಿಕ ದಿಲೀಪ್ ಅವರಿಗೆ ಜಾಮೀನು ದೊರೆತಿತ್ತು.
Advertisement