

ಗೋವಾದ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 25 ಜನರು ಮೃತಪಟ್ಟ ಘಟನೆ ನಂತರ ಭಾರತದಿಂದ ಪಲಾಯನ ಮಾಡಿದ ಸೌರಭ್ ಲೂತ್ರಾ ಮತ್ತು ಅವರ ಸಹೋದರ ಗೌರವ್ ಲೂತ್ರಾ ಅವರನ್ನು ಥೈಲ್ಯಾಂಡ್ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಭಾರತ ಸರ್ಕಾರದ ಕೋರಿಕೆಯ ಮೇರೆಗೆ ಫುಕೆಟ್‌ನಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ದೃಢಪಡಿಸಿದರು.
ದುರಂತದ ಕೆಲವೇ ಗಂಟೆಗಳಲ್ಲಿ ಭಾರತದಿಂದ ಸೋದರರು ಪಲಾಯನ ಮಾಡಿದ್ದರು. ಅಧಿಕಾರಿಗಳ ಪ್ರಕಾರ, ಡಿಸೆಂಬರ್ 7 ರಂದು ನಸುಕಿನ ಜಾವ 1:17 ಕ್ಕೆ ಆನ್‌ಲೈನ್ ಟ್ರಾವೆಲ್ ಪೋರ್ಟಲ್ ಮೂಲಕ ಲುತ್ರಾ ಸೋದರರು ಫುಕೆಟ್‌ಗೆ ಟಿಕೆಟ್ ಬುಕ್ ಮಾಡಿ ಪರಾರಿಯಾಗಿದ್ದರು.
ಆ ಸಮಯದಲ್ಲಿ ಇತ್ತ ನೈಟ್ ಕ್ಲಬ್ ನಲ್ಲಿ ರಕ್ಷಣಾ ಪ್ರಯತ್ನಗಳು ನಡೆಯುತ್ತಿದ್ದರೆ, ಭಾನುವಾರ ಮುಂಜಾನೆ ಇಬ್ಬರೂ ಇಂಡಿಗೋ ವಿಮಾನ ಹತ್ತಿದ್ದರು. ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯ ಅಧಿಕಾರಿಗಳು ಬೆಂಕಿಯನ್ನು ನಿಯಂತ್ರಿಸಲು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲು ಹೆಣಗಾಡುತ್ತಿದ್ದರೆ ಇವರು ವಿದೇಶಕ್ಕೆ ಪಲಾಯನ ಮಾಡಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಅವರ ನಾಪತ್ತೆ ನಂತರ, ಗೋವಾ ಪೊಲೀಸರು ಕೇಂದ್ರ ತನಿಖಾ ದಳ (CBI)ದಿಂದ ಸಹಾಯವನ್ನು ಕೋರಿದ್ದರು. ಇದು ಅಂತಾರಾಷ್ಟ್ರೀಯ ಗಡಿಗಳಲ್ಲಿ ಅವರ ಚಲನವಲನಗಳನ್ನು ಪತ್ತೆಹಚ್ಚಲು ಬ್ಲೂ ಕಾರ್ನರ್ ನೋಟಿಸ್ ನೀಡಲು ಅನುಕೂಲ ಮಾಡಿಕೊಟ್ಟಿತು.
ಇಬ್ಬರೂ ವ್ಯಕ್ತಿಗಳು ಪ್ರಸ್ತುತ ಫುಕೆಟ್‌ನಲ್ಲಿ ಬಂಧನದಲ್ಲಿದ್ದಾರೆ. ಭಾರತಕ್ಕೆ ಮರಳಲು ಔಪಚಾರಿಕ ಕಾರ್ಯವಿಧಾನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
Advertisement