

ನವದೆಹಲಿ: ಅಮೆರಿಕ ಮತ್ತು ಭಾರತ ವಿಶಾಲವಾದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಎದುರು ನೋಡುತ್ತಿರುವಾಗ, ಭಾರತ "ವಾಷಿಂಗ್ಟನ್ ಗೆ ಅತ್ಯುತ್ತಮ ಆಫರ್" ನೀಡಿದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಅವರು ಹೇಳಿದ್ದಾರೆ.
"ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಕೆಲವು ಬೆಳೆಗಳು, ಮಾಂಸ ಮತ್ತು ಉತ್ಪನ್ನಗಳಿಗೆ ಭಾರತದಲ್ಲಿ ಪ್ರತಿರೋಧವಿದೆ. ಅವುಗಳನ್ನು ಭೇದಿಸುವುದು ಕಷ್ಟಕರವಾದ ಕೆಲಸ... ಆದರೆ ಅವರು ಸಾಕಷ್ಟು ಮುಂದಾಲೋಚನೆ ಹೊಂದಿದ್ದಾರೆ. ವ್ಯಾಪಾರ ಮಾತುಕತೆ ವೇಳೆ ಅವರು(ಭಾರತ) ನಮಗೆ ಉತ್ತಮ ಆಫರ್ ನೀಡಿದ್ದಾರೆ. ಒಂದು ದೇಶವಾಗಿ ನಾವು ಸ್ವೀಕರಿಸಿದ್ದರಲ್ಲಿ ಇದು ಅತ್ಯುತ್ತಮವಾದದ್ದು" ಎಂದು ಗ್ರೀರ್ ತಿಳಿಸಿದ್ದಾರೆ.
ದ್ವೀಪಕ್ಷಿಯ ವ್ಯಾಪಾರ ಒಪ್ಪಂದ ಮಾತುಕತೆಗಾಗಿ ಉಪ ವ್ಯಾಪಾರ ಪ್ರತಿನಿಧಿ ರಿಕ್ ಸ್ವಿಟ್ಜರ್ ನೇತೃತ್ವದ ಅಮೆರಿಕ ವ್ಯಾಪಾರ ಒಪ್ಪಂದ ಮಾತುಕತೆ ತಂಡವು ಬುಧವಾರ ದೆಹಲಿಗೆ ಆಗಮಿಸಿದ್ದು, ಎರಡು ದಿನಗಳ ಮಾತುಕತೆ ಆರಂಭವಾಗಿದೆ. ಮೊದಲ ದಿನ, ಅವರು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರೊಂದಿಗೆ ಚರ್ಚೆ ನಡೆಸಿದರು. ಒಪ್ಪಂದಕ್ಕಾಗಿ ನಡೆಯುತ್ತಿರುವ ಮಾತುಕತೆಗಳನ್ನು ಇಬ್ಬರೂ ಪರಿಶೀಲಿಸಿದರು.
ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕ ಯುಎಸ್ ವ್ಯಾಪಾರ ಪ್ರತಿನಿಧಿ ಬ್ರೆಂಡನ್ ಲಿಂಚ್ ಅಮೆರಿಕದ ಮುಖ್ಯ ಸಮಾಲೋಚಕರಾಗಿದ್ದಾರೆ. ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ದರ್ಪಣ್ ಜೈನ್ ಅವರು ಭಾರತದ ಮುಖ್ಯ ಸಮಾಲೋಚಕರಾಗಿದ್ದಾರೆ. ಭಾರತದ ಮಾಜಿ ಮುಖ್ಯ ಸಮಾಲೋಚಕ ಮತ್ತು ಪ್ರಸ್ತುತ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಮಾತುಕತೆಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ.
"ಪರಸ್ಪರ ಪ್ರಯೋಜನಕಾರಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕಾಗಿ ನಡೆಯುತ್ತಿರುವ ಮಾತುಕತೆಗಳು ಸೇರಿದಂತೆ ಭಾರತ-ಅಮೆರಿಕ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಎರಡೂ ಕಡೆಯವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು" ಎಂದು ವಾಣಿಜ್ಯ ಇಲಾಖೆ ತಿಳಿಸಿದೆ.
ಏತನ್ಮಧ್ಯೆ, ಬುಧವಾರ ಜೈಪುರದಲ್ಲಿ ನಡೆದ ಪ್ರವಾಸಿ ರಾಜಸ್ಥಾನಿ ದಿವಸ್‌ನ ಹೊರತಾಗಿ ಮಾತನಾಡಿದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಯುಎಸ್ ಜೊತೆ ನಡೆಯುತ್ತಿರುವ ವ್ಯಾಪಾರ ಮಾತುಕತೆಗಳು ಉತ್ತಮ ಪ್ರಗತಿ ಸಾಧಿಸುತ್ತಿವೆ ಎಂದು ಪುನರುಚ್ಚರಿಸಿದರು.
"ಮಾತುಕತೆಗಳು ನಿರಂತರವಾಗಿ ಪ್ರಗತಿಯಲ್ಲಿವೆ. ನಾವು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದತ್ತ ಸಾಗುತ್ತಿದ್ದೇವೆ" ಎಂದು ಗೋಯಲ್ ಹೇಳಿದ್ದಾರೆ.
Advertisement