

ವಾಷಿಂಗ್ಟನ್: ಅಮೆರಿಕಾದ ಸಂಸ್ಥೆಗಳು ಭಾರತದತ್ತ ಮುಖ ಮಾಡುತ್ತಿದ್ದು, ಇದನ್ನು ದೂರ ಮಾಡಲು ಅಮೆರಿಕಾ ಅಧ್ಯಕ್ಷ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಇದೀಗ ಭಾರತದ ಅಕ್ಕಿ ಅಮದಿನ ಮೇಲೆ ವಕ್ರದೃಷ್ಟಿ ಬೀರಿರುವ ಅವರು, ಭಾರತಕ್ಕೆ ಮತ್ತೊಂದು ತೆರಿಗೆಯ ಬೆದರಿಕೆ ಹಾಕಿದ್ದಾರೆ.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ನಿಧಾನಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಡೊನಾಲ್ಡ್ ಟ್ರಂಪ್ ಅವರು ಅಸಮಾಧಾನಗೊಂಡಿದ್ದಾರೆಂದು ಹೇಳಲಾಗುತ್ತಿದೆ.
ಇದರಂತೆ ಭಾರತದ ಕೃಷಿ ಆಮದಿನ ಮೇಲೆ ಅದರಲ್ಲೂ ವಿಶೇಷವಾಗಿ ಅಕ್ಕಿ ಆಮದಿನ ಮೇಲೆ ಹೊಸ ಸುಂಕಗಳನ್ನು ಪರಿಚಯಿಸುವ ಎಚ್ಚರಿಕೆ ನೀಡಿದ್ದಾರೆ.
ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಮತ್ತು ಇತರ ಏಷ್ಯಾದ ಪೂರೈಕೆದಾರರಿಂದ ಕೃಷಿ ಆಮದಿನ ಬಗೆಗಿನ ತಮ್ಮ ಟೀಕೆಗಳನ್ನು ತೀವ್ರಗೊಳಿಸಿದ್ದಾರೆ.
ಇನ್ನು ಮುಂದೆ ಭಾರತದ ತನ್ನ ಅಕ್ಕಿಯನ್ನು ಅಮೆರಿಕದಲ್ಲಿ ಸುರಿಯುವಂತಿಲ್ಲ. ಭಾರತದ ಅಕ್ಕಿ ಮತ್ತು ಕೆನಡಾದ ರಸಗೊಬ್ಬರಗಳ ಮೇಲೆ ಹೊಸ ಸುಂಕಗಳನ್ನು ಪರಿಚಯಿಸುವ ಬಗ್ಗೆ ನಾನು ಗಂಭೀರವಾಗಿ ಚಿಂತಿಸುತ್ತಿದ್ದೇನೆಂದು ಹೇಳಿದ್ದಾರೆ.
ಸಭೆಯಲ್ಲಿ ದೇಶಿಯ ಅಕ್ಕಿ ಉತ್ಪಾದಕರ ಸಮಸ್ಯೆಗಳ ಬಗ್ಗೆ ಅಧ್ಯಕ್ಷರ ಗಮನ ಸೆಳೆದ ಲೂಸಿಯಾನ ಮೂಲದ ಅಕ್ಕಿ ಗಿರಣಿ ಮಾಲೀಕ ಮೆರಿಲ್ ಕೆನಡಿ, ಇತರ ರಾಷ್ಟ್ರಗಳು ಅಮೆರಿಕದ ಮಾರುಕಟ್ಟೆ ಅಕ್ಕಿ ತಂದು ಸುರಿಯುವುದರಿಂದ ದೇಶದ ದಕ್ಷಿಣ ಭಾಗದಲ್ಲಿ ಅಕ್ಕಿ ಉತ್ಪಾದಕರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಅಕ್ಕಿ ಸುರಿಯುತ್ತಿರುವವರು ಯಾರು? ಎಂದು ಟ್ರಂಪ್ ಕೇಳಿದ್ದು, ಭಾರತ ಮತ್ತು ಥಾಯ್ಲೆಂಡ್ ಎಂದು ಕೆನಡಿ ಹೇಳಿದ್ದಾರೆ.
ಚೀನಾ ಕೂಡ ಈ ಸಾಲಿನಲ್ಲಿ ಇದ್ದು, ಪೋರ್ಟೊ ರಿಕೊಗೆ ಅಕ್ಕಿ ರಫ್ತು ಮಾಡುತ್ತಿದೆ. ಪೋರ್ಟೊ ರಿಕೊ ಅಮೆರಿಕದ ಅಕ್ಕಿಗೆ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿತ್ತು. ಕಳೆದ ಒಂದು ವರ್ಷದಿಂದ ನಾವು ಅಲ್ಲಿಗೆ ಅಕ್ಕಿ ರವಾನಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಐದು ವರ್ಷಗಳಿಂದ ಈ ವ್ಯವಹಾರ ನಡೆಯುತ್ತಿದ್ದು, ಈಗ ಅದು ನಮ್ಮ ಮಾರುಕಟ್ಟೆಯನ್ನು ವ್ಯಾಪಿಸಿದೆ. ನೀವು ವಿಧಿಸಿರುವ ಸುಂಕಗಳಿಂದ ಅದರ ಮೇಲೆ ಸ್ವಲ್ಪ ಪರಿಣಾಮ ಬಿದ್ದಿದೆ. ಆದರೆ, ನಾವು ಸುಂಕವನ್ನು ದ್ವಿಗುಣಗೊಳಿಸಬೇಕಾಗಿದೆ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಟ್ರಂಪ್ ಅವರು, ಸುಂಕವು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಹೇಳಿದರು.
ಇಂತಹ ದೇಶಗಳಿಗೆ ಸುಂಕ ವಿಧಿಸುವುದರಿಂದ ಈ ಸಮಸ್ಯೆ ತುಂಬಾ ಬೇಗನೆ ಪರಿಹಾರವಾಗುತ್ತದೆ. ಸುಂಕ ಕುರಿತ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದ್ದು, ಅದರಲ್ಲಿ ನಾವು ಗೆದ್ದರೆ ನಿಮ್ಮ ಸಮಸ್ಯೆಯನ್ನು ಒಂದೇ ದಿನದಲ್ಲಿ ಪರಿಹರಿಸುತ್ತೇನೆಂದು ತಿಳಿಸಿದರು.
Advertisement