ಕಾಂಗ್ರೆಸ್ ಸಂಸದರ ಸಭೆ: ವಂದೇ ಮಾತರಂ, ಚುನಾವಣಾ ಸುಧಾರಣೆಗಳ ವಿಷಯಗಳಲ್ಲಿ ಸರ್ಕಾರ 'ಒತ್ತಡಕ್ಕೊಳಗಾಗಿದೆ': ರಾಹುಲ್ ಗಾಂಧಿ
ನವದೆಹಲಿ: ವಂದೇ ಮಾತರಂ ಮತ್ತು ಚುನಾವಣಾ ಸುಧಾರಣೆಗಳ ಮೇಲಿನ ಚರ್ಚೆಯ ಸಂದರ್ಭದಲ್ಲಿ ತಮ್ಮ ಪಕ್ಷದ ಸಂಸದರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ, ಈ ಎರಡೂ ವಿಷಯಗಳ ಬಗ್ಗೆ ಸರ್ಕಾರವು ವಿರೋಧ ಪಕ್ಷಗಳಿಂದ 'ಒತ್ತಡದಲ್ಲಿದೆ' ಎಂದು ತಿಳಿಸಿದರು.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದರು ಮತ್ತು ಪಕ್ಷದ ಶಾಸಕರ ಅಭಿಪ್ರಾಯಗಳನ್ನು ಆಲಿಸಿದರು ಮತ್ತು ಅವರ ಪ್ರತಿಕ್ರಿಯೆಯನ್ನು ಪಡೆದರು.
ವಂದೇ ಮಾತರಂ ಮತ್ತು ಚುನಾವಣಾ ಸುಧಾರಣೆಗಳ ಚರ್ಚೆಗಳಲ್ಲಿ ಸರ್ಕಾರವು ವಿರೋಧ ಪಕ್ಷಗಳಿಂದ 'ಒತ್ತಡಕ್ಕೆ ಒಳಗಾಗಿದೆ' ಎಂದು ರಾಹುಲ್ ಸಭೆಯಲ್ಲಿ ಹೇಳಿದ್ದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಇಂಡಿಗೋ ವಿಮಾನ ಸಂಚಾರದಲ್ಲಿ ಅಡಚಣೆಗಳು, ವಾಯು ಮಾಲಿನ್ಯ ಮತ್ತು ಕಾರ್ಮಿಕ ಸಂಹಿತೆಗಳ ಸಮಸ್ಯೆಯಂತಹ ಜನರ ಸದ್ಯದ ಸಮಸ್ಯೆಗಳನ್ನು ಎತ್ತುವಲ್ಲಿ ಪಕ್ಷವು ಯಶಸ್ವಿಯಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್ ಹೇಳಿದರು.
'ವಂದೇ ಮಾತರಂನ 150 ವರ್ಷಗಳ ಚರ್ಚೆಯ ಸಂದರ್ಭದಲ್ಲಿ, ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಜಿ ಮತ್ತು ಲೋಕಸಭೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಜಿ ಅವರು ಸತ್ಯವನ್ನು ಜನರ ಮುಂದೆ ತಂದು ಈ ವಿಷಯವನ್ನು ರಾಜಕೀಯಗೊಳಿಸುವ ಉದ್ದೇಶಗಳನ್ನು ಹೇಗೆ ಮೊಟಕುಗೊಳಿಸಿದರು ಎಂಬುದರ ಬಗ್ಗೆಯೂ ಚರ್ಚಿಸಲಾಯಿತು' ಎಂದು ಸಭೆಯ ನಂತರ ಗೊಗೊಯ್ ಸುದ್ದಿಗಾರರಿಗೆ ತಿಳಿಸಿದರು.
'ರಾಹುಲ್ ಗಾಂಧಿ ಅವರು ಪತ್ರಿಕಾಗೋಷ್ಠಿಗಳಲ್ಲಿ ಎತ್ತಿದ ವೋಟ್ ಚೋರಿ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆಗೆ ಗೃಹ ಸಚಿವ ಅಮಿತ್ ಅಶಾ ಅವರಿಗೆ ಸವಾಲು ಹಾಕಿದರು ಎಂಬುದನ್ನು ಎಲ್ಲರೂ ನೋಡಿದರು. ಗೃಹ ಸಚಿವರು ಕೋಪಗೊಂಡರು ಮತ್ತು ಕೆಲವು ಅಸಂಸದೀಯ ಹೇಳಿಕೆಗಳನ್ನು ನೀಡಿದರು' ಎಂದು ಅವರು ಹೇಳಿದರು.
ರಾಹುಲ್ ಗಾಂಧಿಯವರು ಪ್ರತಿ ಅಧಿವೇಶನದಲ್ಲಿ ಸಂಸದರ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಮತ್ತು ಅವರ ಅಭಿಪ್ರಾಯಗಳು ಮತ್ತು ಪ್ರತಿಕ್ರಿಯೆಗಳನ್ನು ಕೇಳಲು ಕರೆಯುವ ನಿಯಮಿತ ಸಭೆ ಇದಾಗಿದೆ ಎಂದು ಕಾಂಗ್ರೆಸ್ ಮುಖ್ಯ ಸಚೇತಕ ಕೆ ಸುರೇಶ್ ಹೇಳಿದರು.
ವಂದೇ ಮಾತರಂ ಕುರಿತ ಚರ್ಚೆಯು ಎರಡೂ ಸದನಗಳಲ್ಲಿ ಮುಗಿದಿದ್ದರೂ, ಚುನಾವಣಾ ಸುಧಾರಣೆಗಳ ಕುರಿತ ಚರ್ಚೆ ಇನ್ನೂ ರಾಜ್ಯಸಭೆಯಲ್ಲಿ ನಡೆಯುತ್ತಿದೆ.


