

ಕೋಲ್ಕತ್ತಾ: ಇಂದು ಶನಿವಾರ ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣ ಅಕ್ಷರಶಃ ರಣರಂಗದಂತೆ ಆಗಿತ್ತು. ಅರ್ಜೆಂಟೀನಾದ ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿಯನ್ನು ನೋಡಲು ಭಾರಿ ಮೊತ್ತ ಪಾವತಿಸಿ ಟಿಕೆಟ್ ಖರೀದಿಸಿ ಬಂದಿದ್ದ ಪ್ರೇಕ್ಷಕರು, ಆಟಗಾರನನ್ನು ಮೈದಾನದಲ್ಲಿ ನೋಡಲು ಸಾಧ್ಯವಾಗದಿದ್ದಾಗ ಆಕ್ರೋಶಗೊಂಡು ಮೈದಾನಕ್ಕೆ ಏಕಾಏಕಿ ನುಗ್ಗಿ ಕುರ್ಚಿಗಳಿಂದ ಹಿಡಿದು ಕೈಗೆ ಸಿಕ್ಕ ವಸ್ತುಗಳನ್ನು ಎಸೆದು ಪುಡಿಮಾಡಿದ ಘಟನೆ ನಡೆದಿದೆ.
ಆಗಿದ್ದೇನು?
ಲಿಯೋನೆಲ್ ಮೆಸ್ಸಿ ಇಂದು ಬೆಳಗ್ಗೆ 11.30 ರ ಸುಮಾರಿಗೆ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣಕ್ಕೆ ಸ್ಟ್ರೈಕರ್ ಲೂಯಿಸ್ ಸುವಾರೆಜ್ ಮತ್ತು ಅರ್ಜೆಂಟೀನಾ ತಂಡದ ಸಹ ಆಟಗಾರ ರೊಡ್ರಿಗೋ ಡಿ ಪಾಲ್ ಅವರೊಂದಿಗೆ ಆಗಮಿಸಿದರು, ಮೊದಲು ಮೈದಾನಕ್ಕೆ ಇಳಿದರು. ಅಲ್ಲಿ ಸ್ವಲ್ಪ ಸಮಯ ಓಡಾಡಿ ಜನಸಮೂಹದತ್ತ ಕೈ ಬೀಸಿದರು.
ಅವರ ಸುತ್ತ ಉದ್ದಕ್ಕೂ ನಿಂತಿದ್ದ ವಿಐಪಿಗಳು, ಸಂಘಟಕರು ಮತ್ತು ಭದ್ರತಾ ಸಿಬ್ಬಂದಿಯಿಂದ ಸುತ್ತುವರೆದಿದ್ದರು, ಗ್ಯಾಲರಿಗಳಿಂದ ಪ್ರೇಕ್ಷಕರ ಮೆಸ್ಸಿಯನ್ನು ನೋಡಲು ಸಾಧ್ಯವಾಗಲೇ ಇಲ್ಲ.
ಮೆಸ್ಸಿಯನ್ನು ನೋಡಬೇಕೆಂದು ಸಾವಿರಾರು ರೂಪಾಯಿ ಕೊಟ್ಟು ಟಿಕೇಟ್ ಖರೀದಿಸಿ ಬೆಳಿಗ್ಗೆಯಿಂದ ಕಾಯುತ್ತಿದ್ದರೂ, ನೇರವಾಗಿ ಅಥವಾ ಕ್ರೀಡಾಂಗಣದ ದೊಡ್ಡ ಪರದೆಗಳಲ್ಲಿ ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ ಎಂದು ಅಭಿಮಾನಿಗಳು ರೊಚ್ಚಿಗೆದ್ದರು.
"ನಮಗೆ ಮೆಸ್ಸಿ ಬೇಕು" ಎಂಬ ಘೋಷಣೆಗಳು ಗ್ಯಾಲರಿಯಿಂದ ಕೇಳಿಬರುತ್ತಲೇ ಇತ್ತು, ಸ್ವಲ್ಪ ಹೊತ್ತು ಕಾದರು. ಹಲವಾರು ಆಹ್ವಾನಿತ ಗಣ್ಯರು ಬರುವ ಮೊದಲೇ, ಕೆಲವೇ ನಿಮಿಷಗಳಲ್ಲಿ ಅರ್ಜೆಂಟೀನಾದ ತಾರೆ ಮೆಸ್ಸಿಯನ್ನು ಕ್ರೀಡಾಂಗಣದಿಂದ ಹೊರಗೆ ಕರೆದೊಯ್ದಾಗ ಅಭಿಮಾನಿಗಳ ಆಕ್ರೋಶ, ಕೋಪದ ಕಟ್ಟೆಯೊಡೆಯಿತು.
ನಿರಾಶೆಗೊಂಡ ಬೆಂಬಲಿಗರು ಮೈದಾನಕ್ಕೆ ನುಗ್ಗಿ ಬಾಟಲಿಗಳನ್ನು ಎಸೆದು, ಗ್ಯಾಲರಿಗಳಲ್ಲಿದ್ದ ಬ್ಯಾನರ್‌ಗಳು, ಹೋರ್ಡಿಂಗ್‌ಗಳು ಮತ್ತು ಪ್ಲಾಸ್ಟಿಕ್ ಕುರ್ಚಿಗಳನ್ನು ಹಾನಿಗೊಳಿಸಿದರು.
ಕೆಲವು ಪ್ರೇಕ್ಷಕರು ಗ್ಯಾಲರಿಯ ಬ್ಯಾರಿಕೇಡ್‌ಗಳನ್ನು ಹರಿದು ಮೈದಾನದೊಳಗೆ ನುಗ್ಗಿದರು. ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸಪಟ್ಟರು.
ಮೆಸ್ಸಿಯನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹೊರಗೆ ಕರೆದೊಯ್ದು ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದ್ದರಿಂದ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣ ತಪ್ಪಲಿಲ್ಲ. ಆದರೆ ಇಂದಿನ ಘಟನೆ ಜಾಗತಿಕ ಫುಟ್ ಬಾಲ್ ಐಕಾನ್ ಲಿಯೋನೆಸ್ ಮೆಸ್ಸಿ ಭಾರತಕ್ಕೆ ಬಂದಾಗ ಒಂದು ಕಪ್ಪುಚುಕ್ಕೆಯಾಗಿ ಶಾಶ್ವತವಾಗಿ ಉಳಿಯುವುಂತಾಯಿತು.
ಮಧ್ಯರಾತ್ರಿಯಿಂದಲೇ ಕಾದುಕುಳಿತಿದ್ದ ಅಭಿಮಾನಿಗಳು
ಭಾರತದ ನಾಲ್ಕು ನಗರಗಳ ಮೂರು ದಿನಗಳ ಗೋಟ್ ಇಂಡಿಯಾ ಟೂರ್ 2025 ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಂದು ಶನಿವಾರ ಮುಂಜಾನೆ ಕೋಲ್ಕತ್ತಾಗೆ ಆಗಮಿಸಿದ ಮೆಸ್ಸಿ ಅವರನ್ನು ಸ್ವಾಗತಿಸಲು ಡಿಸೆಂಬರ್ ತಿಂಗಳ ಈ ಕೊರೆಯುವ ಚಳಿಯನ್ನು ಲೆಕ್ಕಿಸದೆ ಸಾವಿರಾರು ಫುಟ್ಬಾಲ್ ಅಭಿಮಾನಿಗಳು ಮಧ್ಯರಾತ್ರಿಯಿಂದ ಕಾದುಕುಳಿತಿದ್ದರು.
ಎಲ್ಲರೂ ಕಾಯುತ್ತಿದ್ದ ಕ್ಷಣವು ಅಂತಿಮವಾಗಿ ಬಂದಿತು, ಲಿಯೋನೆಲ್ ಮೆಸ್ಸಿ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಕಾಲಿಟ್ಟು, ಫುಟ್ಬಾಲ್ ಐಕಾನ್‌ನ ಒಂದು ನೋಟಕ್ಕಾಗಿ ಬೆಳಿಗ್ಗೆಯಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕೈ ಬೀಸಿದರು.
ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಅವರೊಂದಿಗೆ ಸೇರಿಕೊಂಡ ಮೆಸ್ಸಿಯ ಪ್ರವೇಶಕ್ಕೆ ಘೋಷಣೆಗಳು, ಧ್ವಜಗಳನ್ನು ಬೀಸುವ ಮೂಲಕ ಅಭಿಮಾನಿಗಳು ಕಣ್ಣೀರು ಹಾಕಿ ಸ್ವಾಗತಿಸಿದರು.
ಕೋಲ್ಕತ್ತಾದಲ್ಲಿ ಲಿಯೋನೆಲ್ ಮೆಸ್ಸಿಗೆ ಅಭೂತಪೂರ್ವ ಸ್ವಾಗತ ದೊರೆಯುತ್ತಿದ್ದಂತೆ, ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅವರ ಹೆಸರಿನ ಘೋಷಣೆಗಳು ಮೊಳಗಿದವು. ಮೆಸ್ಸಿಯ ಅಭಿಮಾನಿಗಳು ಅವರ ಹೆಸರಿನ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದರು.
Advertisement