

ಕೋಲ್ಕತ್ತಾ: ಮೂರು ದಿನಗಳ ಕಾಲ ಭಾರತ ಪ್ರವಾಸದಲ್ಲಿರುವ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಶನಿವಾರ ಬೆಳಗ್ಗೆ ಕೋಲ್ಕತ್ತಾಗೆ ಆಗಮಿಸಿದ್ದು, ಅರ್ಜೆಂಟೀನಾದ ಸೂಪರ್‌ಸ್ಟಾರ್ ನನ್ನು ಸ್ವಾಗತಿಸಲು ಚಳಿಯನ್ನು ಲೆಕ್ಕಿಸದೇ ಸಾವಿರಾರು ಫುಟ್‌ಬಾಲ್ ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಕಾಯುತ್ತಿದ್ದರು. ಕೋಲ್ಕತ್ತಾ ಸಂಪೂರ್ಣ ಮೆಸ್ಸಿ ಮಯವಾಗಿದೆ.
ಮೆಸ್ಸಿಯ ನಾಲ್ಕು ನಗರಗಳ GOAT ಇಂಡಿಯಾ ಟೂರ್ 2025 ಇಂದಿನಿಂದ ಆರಂಭವಾಗಿದ್ದು, ಕೋಲ್ಕತಾ ನಂತರ ಹೈದರಾಬಾದ್, ಮುಂಬೈ ಹಾಗೂ ದೆಹಲಿಗೆ ಭೇಟಿ ನೀಡಲಿದ್ದಾರೆ. ಪ್ರತಿ ನಗರಗಳಲ್ಲೂ ವಿಶೇಷ ಹಾಗೂ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಭಾರತಕ್ಕೆ ಆಗಮಿಸಿದ ಮೆಸ್ಸಿ ಜೊತೆಗೆ ಅವರ ಇಂಟರ್ ಮಿಯಾಮಿ ತಂಡದ ಆಟಗಾರರಾದ ರೊಡ್ರಿಗೋ ಡಿ ಪಾಲ್ ಮತ್ತು ಲೂಯಿಸ್ ಸುವಾರೆಜ್ ಸಹ ಭಾರತಕ್ಕೆ ಆಗಮಿಸಿದ್ದಾರೆ.
ಮೆಸ್ಸಿ ಅವರ ಖಾಸಗಿ ಗಲ್ಫ್‌ಸ್ಟ್ರೀಮ್ V ವಿಮಾನವು ಇಂದು ಬೆಳಗಿನ ಜಾವ 2.26ಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. 14 ವರ್ಷಗಳ ನಂತರ ಭಾರತಕ್ಕೆ ಮರಳಿದ ಮೆಸ್ಸಿಯನ್ನು ನೋಡಲು ಸಾವಿರಾರು ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದರು. ಅವರು ಅರ್ಜೆಂಟೀನಾದ ಧ್ವಜಗಳನ್ನು ಬೀಸುತ್ತಾ 'ಮೆಸ್ಸಿ ಮೆಸ್ಸಿ' ಎಂದು ಘೋಷಣೆ ಕೂಗುತ್ತಾ ಭವ್ಯ ಸ್ವಾಗತ ನೀಡಿದರು.
ಮೊದಲ ಕಾರ್ಯಕ್ರಮದಲ್ಲಿ ಬೆಳಗ್ಗೆ 10.30ಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಅವರೊಂದಿಗೆ ಲೇಕ್‌ಟೌನ್‌ನಲ್ಲಿರುವ 70 ಅಡಿ ಎತ್ತರದ ಪ್ರತಿಮೆಯನ್ನು ಮೆಸ್ಸಿ ವರ್ಚುಯಲ್ ಆಗಿ ಅನಾವರಣಗೊಳಿಸಿದರು. ಭದ್ರತಾ ಕಾರಣಗಳಿಂದಾಗಿ ಮೆಸ್ಸಿ ಅಲ್ಲಿಗೆ ಹೋಗಲಿಲ್ಲ. ನಂತರ, ಲಿಯೋನೆಲ್ ಮೆಸ್ಸಿ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಆಗಮಿಸಿ, ಫುಟ್‌ಬಾಲ್ ಐಕಾನ್‌ನ ಒಂದು ನೋಟಕ್ಕಾಗಿ ಬೆಳಗ್ಗೆಯಿಂದಲೇ ಕಾಯುತ್ತಿದ್ದ ಅಭಿಮಾನಿಗಳತ್ತ ಕೈ ಬೀಸಿದರು.
ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಮೆಸ್ಸಿ ಭೇಟಿಯಾಗಲಿದ್ದಾರೆ.
Advertisement