

ಚೆನ್ನೈ: ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಕಾರ್ಯಗತಗೊಳಿಸುವ ಮೂಲಕ ತಮಿಳುನಾಡನ್ನು ಮರುಭೂಮಿಯನ್ನಾಗಿ ಪರಿವರ್ತಿಸುವುದು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಏಕೈಕ ಗುರಿಯಾಗಿದೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಹೇಳಿದ್ದಾರೆ.
ಕರ್ನಾಟಕ ಸರ್ಕಾರವು ತಮಿಳುನಾಡಿಗೆ ವ್ಯತಿರಿಕ್ತ ಪರಿಣಾಮಗಳನ್ನು ಕಡೆಗಣಿಸಿ ಮೇಕೆದಾಟುನಲ್ಲಿ ಸಮತೋಲನ ಜಲಾಶಯವನ್ನು ನಿರ್ಮಿಸುವ ತನ್ನ ಯೋಜನೆಯೊಂದಿಗೆ ಮುಂದುವರಿಯುತ್ತಿದೆ. ಈ "ದುರದೃಷ್ಟಕರ ಪರಿಸ್ಥಿತಿಗೆ" ರಾಜ್ಯದಲ್ಲಿನ ಆಡಳಿತಾರೂಢ ಡಿಎಂಕೆ ಸರ್ಕಾರವೇ ಕಾರಣ ಎಂದು ದೂರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ತಮಿಳುನಾಡು ಜನರ ಜೀವನೋಪಾಯದ ವಿಷಯವಾಗಿ ಕಾವೇರಿ ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡಿನ ಪರವಾಗಿ ಬಲವಾದ ವಾದ ಮಂಡಿಸಲಿಲ್ಲ. ಅರೆಮನಸ್ಸಿನಿಂದ ನಡೆಸಿತು ಎಂದು ಆರೋಪಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ನಂತರ ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ಯೋಜನೆ ಕಾಮಗಾರಿ ತ್ವರಿತಗೊಳಿಸಲು ತಜ್ಞರ ತಂಡವನ್ನು ರಚಿಸಿರುವ ಹಿನ್ನೆಲೆಯಲ್ಲಿ ಪಳನಿಸ್ವಾಮಿ ಈ ಹೇಳಿಕೆ ನೀಡಿದ್ದಾರೆ.
ಡಿಎಂಕೆ ಅಧಿಕಾರಕ್ಕೆ ಬಂದಾಗಲೆಲ್ಲಾ ಕಾವೇರಿ ನದಿ ನೀರಿನ ವಿಷಯದಲ್ಲಿ ಕರ್ನಾಟಕಕ್ಕೆ ತಮಿಳುನಾಡು ಹಕ್ಕುಗಳನ್ನು ಬಿಟ್ಟುಕೊಟ್ಟಿದೆ. ಡಿಎಂಕೆಯ ಈ ದ್ರೋಹವನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದಿರುವ ಅವರು, ಕಾವೇರಿ ಮೇಲಿನ ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸಲು ಮುಖ್ಯಮಂತ್ರಿಗಳು ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Advertisement