

ಕೋಲ್ಕತಾ: ಫುಟ್ಬಾಲ್ ಸೂಪರ್ ಸ್ಟಾರ್ ಮೆಸ್ಸಿ ಭಾರತ ಭೇಟಿ ವೇಳೆ ಹೈಡ್ರಾಮಾ ನಡೆದಿದ್ದು ಕೋಲ್ಕತಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಆಯೋಜಕರ ವಿರುದ್ಧವೇ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ.
ಅರ್ಜೆಂಟೀನಾ ಫುಟ್ಬಾಲ್ ಸೂಪರ್ ಸ್ಟಾರ್ ಲಿಯೋನೆಲ್ ಮೆಸ್ಸಿ ಭಾರತದಲ್ಲಿ GOAT ಟೂರ್‌ಗೆ ಸಂಭ್ರಮಾಚರಣೆಯ ಕಿಕ್‌ಆಫ್ ಎಂದು ಹೇಳಲಾಗಿದ್ದ ಕಾರ್ಯಕ್ರಮ ದೊಡ್ಡ ಹೈಡ್ರಾಮಾಕ್ಕೆ ವೇದಿಕೆಯಾಗಿತ್ತು. ಶನಿವಾರ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಮೆಸ್ಸಿ ಕಾರ್ಯಕ್ರಮ ಕೋಲಾಹಲಕ್ಕೆ ಕಾರಣವಾಯಿತು.
ಮೆಸ್ಸಿ ಕಾರ್ಯಕ್ರಮದ ಆಜೋಕರ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕ್ರೀಡಾಂಗಣದಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಪ್ರೇಕ್ಷಕರು ಮೈದಾನಕ್ಕೆ ನುಗ್ಗಿ, ಬಾಟಲಿಗಳು ಮತ್ತು ಕುರ್ಚಿಗಳನ್ನು ಎಸೆದರು, ಆಸನಗಳನ್ನು ಹರಿದು ಹಾಕಿದರು ಮತ್ತು ಬ್ಯಾನರ್‌ಗಳನ್ನು ಹರಿದು ಹಾಕಿದರು.
ಅಭಿಮಾನಿಗಳಿಗೆ ಆಯೋಜಕರಿಂದ ಧೋಖಾ
ಇನ್ನು ಮೆಸ್ಸಿ ಕಾರ್ಯಕ್ರಮಕ್ಕೆ ಅಗಮಿಸಿದ್ದ ಅಭಿಮಾನಿಗಳು ಸಾವಿರಾರು ಹಣ ನೀಡಿ ಟಿಕೆಟ್ ಖರೀದಿಸಿದ್ದರು. ಟಿಕೆಟ್ ತಲಾ 12 ಸಾವಿರ ರೂ ನೀಡಿ ಸುಮಾರು 80 ಸಾವಿರ ಅಭಿಮಾನಿಗಳು ಟಿಕೆಟ್ ಖರೀದಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮೆಸ್ಸಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾದಿದ್ದರು.
ರಾಜಕೀಯ ನಾಯಕರ ಮೇಲಾಟ, ಅಭಿಮಾನಿಗಳಿಗೆ ನಿರಾಶೆ
ಆದರೆ ಈ ಕಾರ್ಯಕ್ರಮದಲ್ಲಿ ಪಶ್ಚಿಮಬಂಗಾಳದ ಪ್ರಭಾವಿ ರಾಜಕಾರಣಿಗಳು ಮೆಸ್ಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದರಿಂದ ಪೊಲೀಸರು ಮೆಸ್ಸಿ ಮತ್ತು ವಿಐಪಿ ರಾಜಕಾರಣಿಗಳ ಭದ್ರತೆಯ ಮೇಲೆ ಗಮನಹರಿಸಿದರು. ಇದರಿಂದ ಕಾರ್ಯಕ್ರಮಕ್ಕೆ ತೊಂದರೆಯಾಯಿತು.
ಮೆಸ್ಸಿ ಕಾರ್ಯಕ್ರಮವು ಕೇವಲ 10-20 ನಿಮಿಷಗಳ ಕಾಲ ನಡೆದ ನಂತರ, ವಿಐಪಿಗಳು, ರಾಜಕಾರಣಿಗಳು ಮತ್ತು ಭಾರೀ ಭದ್ರತೆಯಿಂದ ಮರೆಮಾಡಲ್ಪಟ್ಟ ನಂತರ ಅಭಿಮಾನಿಗಳಲ್ಲಿ ಆಕ್ರೋಶದ ಕಟ್ಟೆ ಹೊಡೆಯಿತು. ಆಯೋಜಕರು ಕಳಪೆ ನಿರ್ವಹಣೆ ಮಾಡಿದ್ದಾರೆ ಎಂದು ಅಭಿಮಾನಿಗಳು ಪ್ರತಿಭಟಿಸಿದರು.
ನಿರಾಶೆಗೊಂಡ ಅಭಿಮಾನಿಗಳು ಅಶಾಂತಿಯ ನಡುವೆ ಮೆಸ್ಸಿಯನ್ನು ಹಠಾತ್ತನೆ ಹೊರಹೋಗುವಂತೆ ಒತ್ತಾಯಿಸಿದರು. ಪೊಲೀಸರು ಮಧ್ಯಪ್ರವೇಶಿಸಿ, ಕಾರ್ಯಕ್ರಮದ ಮುಖ್ಯ ಸಂಘಟಕ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ.
ಕಾರ್ಪೆಟ್ ಅನ್ನೇ ಹೊತ್ತೊಯ್ದ ಭೂಪ!
ಈ ನಡುವೆ ಅಭಿಮಾನಿಯೋರ್ವ ಕಾರ್ಯಕ್ರಮದಿಂದ ಹೋಗುವ ವೇಳೆ ಕಾರ್ಯಕ್ರಮಕ್ಕೆ ಹಾಸಿದ್ದ ರೆಡ್ ಕಾರ್ಪೆಟ್ ಅನ್ನೇ ಹೊತ್ತೊಯ್ದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಆತ ಕಾರ್ಪೆಟ್ ಹೊತ್ತೊಯ್ಯುತ್ತಿದ್ದಾಗ ಸುದ್ದಿಗಾರರೊಬ್ಬರು ಮಾತನಾಡಿಸಿದ್ದು ಈ ವೇಳೆ ಆತ ಕಾರ್ಯಕ್ರಮದ ಆಯೋಜಕರು ನಮ್ಮಿಂದ ಹಣ ಪಡೆದು ಮೋಸ ಮಾಡಿದ್ದಾರೆ. ಹೀಗಾಗಿ ರೆಡ್ ಕಾರ್ಪೆಟ್ ಹೊತ್ತೊಯ್ಯುತ್ತಿರುವುದಾಗಿ ಹೇಳಿದ್ದಾರೆ. ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
Advertisement