

ಮಲಪ್ಪುರಂ: ಕಳೆದ ವಾರ ನಡೆದ ಪುರಸಭೆ ಚುನಾವಣೆಯಲ್ಲಿ 47 ಮತಗಳ ಅಂತರದಿಂದ ಜಯಗಳಿಸಿದ ಸಂಭ್ರಮಾಚರಣೆಗಾಗಿ ಮಲಪ್ಪುರಂ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇರಳದ ಆಡಳಿತಾರೂಢ ಸಿಪಿಎಂ ಸದಸ್ಯ ಸಯೀದ್ ಅಲಿ ಮಜೀದ್ ನೀಡಿದ ಸ್ತ್ರೀದ್ವೇಷದ ಹೇಳಿಕೆ ಇದೀಗ ತೀವ್ರ ವಿವಾದಕ್ಕೆ ಗುರಿಯಾಗಿದೆ.
ಮಹಿಳೆಯರು ಸೇರಿದಂತೆ ನೂರಾರು ಎಡಪಂಥೀಯ ಕಾರ್ಯಕರ್ತರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿನ ತಮ್ಮ ಭಾಷಣದಲ್ಲಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಕ್ಕಾಗಿ ಮುಸ್ಲಿಂ ಲೀಗ್ ಅನ್ನು ಗುರಿಯಾಗಿಸಿಕೊಂಡ ಮಜೀದ್, ಆ ಪಕ್ಷವು 'ಮತಗಳಿಗಾಗಿ ಮಹಿಳೆಯರನ್ನು ಬಳಸುತ್ತಿದೆ'. ಮತಗಳಿಗಾಗಿ ಅವರು ಮಹಿಳೆಯರನ್ನು ಪ್ರದರ್ಶಿಸುತ್ತಿದ್ದಾರೆ...' ಎಂದು ಹೇಳಿದರು.
ಮುಸ್ಲಿಂ ಲೀಗ್ ಕಣಕ್ಕಿಳಿಸಿದ ಮಹಿಳಾ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ಮಾಡಿದ ಅಸಭ್ಯ ಹೇಳಿಕೆಗಳಿಂದ ತೃಪ್ತರಾಗದ ಮಜೀದ್, '...ನಮ್ಮ ಮನೆಯಲ್ಲೂ ಮಹಿಳೆಯರು ಇದ್ದಾರೆ. ನಾವು ಅವರನ್ನು ಮದುವೆಯಾಗಿದ್ದೇವೆ... ಆದರೆ, ಮತಗಳಿಗಾಗಿ ಅಥವಾ ಚುನಾವಣೆಯಲ್ಲಿ ಗೆಲ್ಲಲು ಅವರನ್ನು ನಾವು ಪ್ರದರ್ಶನಕ್ಕೆ ಇಡುವುದಿಲ್ಲ. ಅವರು ಮನೆಯಲ್ಲಿಯೇ ಇರಲಿ. ಮಹಿಳೆಯರನ್ನು ಸೆಕ್ಸ್ ಮಾಡಲು ಮತ್ತು ಮಕ್ಕಳನ್ನು ಮಾಡಿಕೊಳ್ಳಲು ಮದುವೆಯಾಗಿ' ಎಂದಿದ್ದಾರೆ.
ಮುಂದುವರಿದು 'ಅದಕ್ಕಾಗಿಯೇ ಕುಟುಂಬಗಳು ಸಾಂಪ್ರದಾಯಿಕವಾಗಿ ಮದುವೆಗಳನ್ನು ಏರ್ಪಡಿಸುವಾಗ ವಂಶಾವಳಿ ಮತ್ತು ಹಿನ್ನೆಲೆಯನ್ನು ಪರಿಶೀಲಿಸುತ್ತವೆ...' ಎಂದು ನಾಲಗೆ ಹರಿಬಿಟ್ಟಿದ್ದಾರೆ.
ಈಮಧ್ಯೆ, ಚುನಾವಣಾ ಫಲಿತಾಂಶಗಳು ಮುಂದಿನ ವರ್ಷದ ಚುನಾವಣೆಗೆ ಮುನ್ನ ಆಡಳಿತಾರೂಢ ಸಿಪಿಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಸರ್ಕಾರಕ್ಕೆ ಹಿನ್ನಡೆಯಾಗಿ ಕಂಡುಬರುತ್ತಿವೆ.
ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಆರು ಮುನ್ಸಿಪಲ್ ಕಾರ್ಪೊರೇಷನ್‌ಗಳ ಪೈಕಿ ನಾಲ್ಕರಲ್ಲಿ ಜಯಗಳಿಸಿದೆ. ಕಣ್ಣೂರಿನ ಆಡಳಿತವನ್ನು ಉಳಿಸಿಕೊಂಡಿದ್ದು, ಈ ಹಿಂದೆ ಎಲ್‌ಡಿಎಫ್ ವಶದಲ್ಲಿದ್ದ ಕೊಚ್ಚಿ ಮತ್ತು ಕೊಲ್ಲಂ ಅನ್ನು ವಶಪಡಿಸಿಕೊಂಡಿದೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು, ರಾಜ್ಯ ರಾಜಧಾನಿ ತಿರುವನಂತಪುರದ ಮೇಲೆ ಹಿಡಿತ ಸಾಧಿಸಿದೆ. ಇದನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿನಿಧಿಸುತ್ತಾರೆ.
Advertisement