

ನವದೆಹಲಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ರ‍್ಯಾಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ವಿವಾದಾತ್ಮಕ ಘೋಷಣೆಗಳು ಕೇಳಿಬಂದಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕ್ಷಮೆಯಚುಸುವಂತೆ ಆಡಳಿತಾರೂಢ ಪಕ್ಷ ಆಗ್ರಹಿಸಿದೆ.
ಸಂಸತ್ತಿನ ಕೆಳಮನೆ ಮತ್ತು ಮೇಲ್ಮನೆ ಎರಡರಲ್ಲೂ ಕಲಾಪಗಳು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಯಿತು. ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ರ್ಯಾಲಿಯಲ್ಲಿ ಮೋದಿ ವಿರುದ್ಧ ಕೂಗಲಾದ ಘೋಷಣೆ ವಿಚಾರವನ್ನು ಆಡಳಿತಾರೂಢ ಪಕ್ಷದ ನಾಯಕರು ಪ್ರಸ್ತಾಪಿಸಿದರು.
ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಮಾತನಾಡಿ, ಕಾಂಗ್ರೆಸ್ ರ್ಯಾಲಿಯಲ್ಲಿ ಪ್ರಧಾನಿಯವರ ಜೀವ ತೆಗೆಯುವುದಾಗಿ, ಮೋದಿ ಅವರ ಸಮಾಧಿಯನ್ನು ಅಗೆಯುವುದಾಗಿ ಬಹಿರಂಗವಾಗಿ ಘೋಷಿಸುವುದು ಭಾರತೀಯ ರಾಜಕೀಯ ಇತಿಹಾಸದಲ್ಲಿ ಅತ್ಯಂತ ದುರದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರು 2047 ರ ವೇಳೆಗೆ ವಿಕಸಿತ ಭಾರತ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಗುರಿಯಾಗಿಟ್ಟುಕೊಂಡು ರಾಷ್ಟ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಮೋದಿ ಅವರ ಕನಸು ಭಾರತವನ್ನು ಬಲಿಷ್ಠ ಮತ್ತು ಹೆಮ್ಮೆಯನ್ನಾಗಿ ಮಾಡುವುದಾಗಿದೆ, ಆದರೆ, ಇವರ ಬಗ್ಗೆ ಇಂತಹ ಘೋಷಣೆಗಳು ದುರಂತ ಮತ್ತು ಸ್ವೀಕಾರಾರ್ಹವಲ್ಲ. ಹೀಗಾಗಿ, ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಸಂಸತ್ತಿನ ಸದನದಿಂದ ದೇಶದ ಮುಂದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ರ್ಯಾಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿಯವರ ಸಮಾಧಿ ಅಗೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ಅತ್ಯಂತ ದುರದೃಷ್ಟಕರ ವಿಚಾರ. ಪ್ರಧಾನಿ ಮೋದಿ ದೇಶದ 140 ಕೋಟಿ ಜನರ ನಾಯಕ ಮತ್ತು ವಿಶ್ವದ ಅತ್ಯಂತ ಬಲಿಷ್ಠ ನಾಯಕ. ಬೆದರಿಕೆ ಹಾಕಿರುವುದಕ್ಕೆ ಕಾಂಗ್ರೆಸ್ ಪಕ್ಷ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
ಜೆ.ಪಿ.ನಡ್ಡಾ ಅವರು ಮಾತನಾಡಿ, ಭಾನುವಾರ ನಡೆದ ರ್ಯಾಲಿಯಲ್ಲಿ ಮೋದಿಗೆ ಬೆದೆರಿಕೆ ಹಾಕುವ ಘೋಷಣೆಗಳನ್ನು ಕೂಗಿದ್ದಕ್ಕೆ ಸೋನಿಯಾ ಗಾಂಧಿಯವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
Advertisement