

ತೆಲಂಗಾಣ: ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ಇತ್ತೀಚೆಗೆ ಯಹೂದಿ ಸಭೆ ಮೇಲೆ ನಡೆದ ಗುಂಡಿನ ದಾಳಿಯ ಶಂಕಿತ ಉಗ್ರರಲ್ಲಿ ಒಬ್ಬನಾದ ಸಾಜಿದ್ ಅಕ್ರಮ್ ಹೈದರಾಬಾದ್ ಮೂಲದವರು ಎಂದು ತೆಲಂಗಾಣ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
27 ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದ ಸಾಜಿದ್ ಅಕ್ರಮ್ ಹೈದರಾಬಾದ್‌ನಲ್ಲಿರುವ ತನ್ನ ಕುಟುಂಬದೊಂದಿಗೆ ಸೀಮಿತ ಸಂಪರ್ಕವನ್ನು ಹೊಂದಿದ್ದರು ಎಂದು ತೆಲಂಗಾಣ ಡಿಜಿಪಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಸಾಜಿದ್ ಅಕ್ರಮ್ ಮತ್ತು ಅವರ ಮಗ ನವೀದ್ ಅಕ್ರಮ್ ಮತಾಂಧರಾಗಿ ಬದಲಾಗಿದ್ದಕ್ಕೆ ಕಾರಣವಾದ ಅಂಶಗಳು ತಿಳಿದುಬಂದಿಲ್ಲ. ಭಾರತ ಅಥವಾ ತೆಲಂಗಾಣದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಅದು ಹೇಳಿದೆ.
ಹೈದರಾಬಾದ್‌ನಲ್ಲಿ ಬಿ.ಕಾಂ. ವಿದ್ಯಾಭ್ಯಾಸ ಮುಗಿಸಿದ ಸಾಜಿದ್ ಅಕ್ರಮ್, ನವೆಂಬರ್ 1998 ರಲ್ಲಿ ಉದ್ಯೋಗವನ್ನು ಹುಡುಕಿಕೊಂಡು ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದರು ಎಂದು ಡಿಜಿಪಿ ಕಚೇರಿ ಮಾಹಿತಿ ಹಂಚಿಕೊಂಡಿದೆ. 50 ವರ್ಷದ ಸಾಜಿದ್ ಅಕ್ರಮ್ ಹಣ್ಣಿನ ಅಂಗಡಿಯೊಂದರ ಮಾಲೀಕನಾಗಿದ್ದ. ಈತ ಪೊಲೀಸರ ಗುಂಡೇಟಿಗೆ ಸ್ಥಳದಲ್ಲೇ ಮೃತಪಟ್ಟಿದ್ದ.
ಇನ್ನು ಈತನ ಮಗ ನವೀದ್ ಅಕ್ರಮ್ ನನ್ನು ಘಟನಾ ಸ್ಥಳದಲ್ಲೇ ಬಂಧಿಸಲಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಂದೆ-ಮಗ ಐಸಿಸ್ ಸಿದ್ಧಾಂತದಿಂದ ಪ್ರೇರಿತರಾಗಿದ್ದರು ಎಂದು ವರದಿಗಳು ಹೇಳುತ್ತವೆ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸಾಜಿದ್ ಅಕ್ರಮ್ ಆಸ್ಟ್ರೇಲಿಯಾದಲ್ಲಿ ಶಾಶ್ವತವಾಗಿ ನೆಲೆಸುವ ಮುನ್ನಾ ಯುರೋಪಿಯನ್ ಮೂಲದ ಮಹಿಳೆ ವೆನೆರಾ ಗ್ರೊಸೊ ಅವರನ್ನು ವಿವಾಹವಾಗಿದ್ದರು. ಸಾಜಿದ್ ಅಕ್ರಮ್ ಘಟನೆ ನಡೆದ ದಿನವರೆಗೂ ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದು, ಅವರ ಮಗ ನವೀದ್ ಅಕ್ರಮ್ ಮತ್ತು ಮಗಳು ಆಸ್ಟ್ರೇಲಿಯಾದಲ್ಲಿ ಜನಿಸಿದ್ದು, ಆಸ್ಟ್ರೇಲಿಯಾದ ನಾಗರಿಕರಾಗಿದ್ದಾರೆ. ಸಾಜಿದ್ ಅಕ್ರಮ್ ಕಳೆದ 27 ವರ್ಷಗಳಿಂದ ಹೈದರಾಬಾದ್‌ನಲ್ಲಿರುವ ತನ್ನ ಕುಟುಂಬದೊಂದಿಗೆ ಸೀಮಿತ ಸಂಪರ್ಕವನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಜಿದ್ ಅಕ್ರಮ್ ಆಸ್ಟ್ರೇಲಿಯಾಕ್ಕೆ ವಲಸೆ ಬಂದ ನಂತರ ಆರು ಸಂದರ್ಭಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಕುಟುಂಬ ಸಂಬಂಧಿತ ಆಸ್ತಿ ವಿಷಯಗಳು ಮತ್ತು ವಯಸ್ಸಾದ ಪೋಷಕರ ಭೇಟಿಗಾಗಿ ಒಮ್ಮೆ ಭೇಟಿ ನೀಡಿದ್ದರು. ತನ್ನ ತಂದೆಯ ನಿಧನದ ಸಮಯದಲ್ಲೂ ಅವರು ಭಾರತಕ್ಕೆ ಬಂದಿರಲಿಲ್ಲ ಎಂಬುದು ತಿಳಿದುಬಂದಿದೆ. ಕುಟುಂಬದ ಸದಸ್ಯರು ಆತನ ಮತಾಂಧತೆ ನೀತಿ ಅಥವಾ ಚಟುವಟಿಕೆಗಳ ಬಗ್ಗೆ ಯಾವುದೇ ಮಾಹಿತಿ ಹೊಂದಿರಲಿಲ್ಲ ಅಥವಾ ಅವರು ಹಾಗೆ ಆಗಲು ಕಾರಣವೇನು ಎಂಬುದು ತಿಳಿದಿರಲಿಲ್ಲ ಎನ್ನಲಾಗಿದೆ.
ಸಾಜಿದ್ ಅಕ್ರಮ್ ಅವರ ಮಗ ನವೀದ್ ಉಗ್ರರು ಕಾರಣವಾದ ಅಂಶಗಳು ಭಾರತ ಅಥವಾ ತೆಲಂಗಾಣದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 1998 ರಲ್ಲಿ ಹೈದರಾಬಾದಿನಿಂದ ತೆರಳುವ ಮುನ್ನಾ ಸಾಜಿದ್ ಅಕ್ರಮ್ ವಿರುದ್ಧ ಯಾವುದೇ ದೂರು ದಾಖಲಾಗಿರಲಿಲ್ಲ. ಅವರು ಕೇಂದ್ರೀಯ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ಬಯಸಿದಾಗ ಸಹಕರಿಸಲು ಬದ್ಧರಾಗಿರುವುದಾಗಿ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಸತ್ಯ ಪರಿಶೀಲಿಸದೆ ಊಹಾಪೋಹಗಳು ಅಥವಾ ಆರೋಪಗಳನ್ನು ಹರಡದಂತೆ ಸಾರ್ವಜನಿಕರು ಮತ್ತು ಮಾಧ್ಯಮಗಳನ್ನು ಅವರು ಒತ್ತಾಯಿಸಿದ್ದಾರೆ.
Advertisement