

ಮೆಂಧರ್/ಜಮ್ಮು: ತನ್ನ ತಂದೆಯೊಂದಿಗೆ ವಾಗ್ವಾದ ನಡೆಸಿದ ನಂತರ ಪಾಕ್ ಆಕ್ರಮಿತ ಕಾಶ್ಮೀರದಿಂದ (ಪಿಒಕೆ) ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಗೆ ನುಸುಳಿದ್ದ ಪಾಕಿಸ್ತಾನಿ ಮಹಿಳೆಯನ್ನು ಸೇನಾ ಪಡೆಗಳು ಬುಧವಾರ ಬಂಧಿಸಿವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
'ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಗಿಮ್ಮಾ ಪ್ರದೇಶದ ಶೆಹ್ನಾಜ್ ಅಖ್ತರ್ ಎಂದು ಗುರುತಿಸಲಾದ 35 ವರ್ಷದ ಪಾಕಿಸ್ತಾನಿ ಪ್ರಜೆಯನ್ನು ಮಂಗಳವಾರ ಬಾಲಾಕೋಟ್ ಸೆಕ್ಟರ್‌ನ ಡಬ್ಬಿ ಫಾರ್ವರ್ಡ್ ಪ್ರದೇಶದಲ್ಲಿ ಸೇನಾ ಪಡೆಗಳು ಬಂಧಿಸಿವೆ' ಎಂದು ಅವರು ಹೇಳಿದರು.
ಪ್ರಾಥಮಿಕ ತನಿಖೆಯಲ್ಲಿ ಆಕೆ ತನ್ನ ತಂದೆಯೊಂದಿಗೆ ಜಗಳವಾಡಿಕೊಂಡು ಮನೆಯಿಂದ ಎಲ್‌ಒಸಿ ಪ್ರದೇಶದ ಕಡೆಗೆ ಓಡಿಬಂದಿದ್ದಾರೆ. ಬಳಿಕ ಭಾರತೀಯ ಸೇನೆ ಆಕೆಯನ್ನು ಬಂಧಿಸಿದೆ ಎಂದು ತಿಳಿದುಬಂದಿದೆ ಎಂದು ಅವರು ಹೇಳಿದರು.
ಮಹಿಳೆಯನ್ನು ಇನ್ನೂ ಪೊಲೀಸರಿಗೆ ಹಸ್ತಾಂತರಿಸಲಾಗಿಲ್ಲ ಎಂದು ಅವರು ಹೇಳಿದರು.
Advertisement