ಕೇರಳದಲ್ಲಿ ಕುಸಿಯುತ್ತಿರುವ ಕಮ್ಯುನಿಸ್ಟರ ಕೋಟೆ (ನೇರ ನೋಟ)

ಕೇರಳದಲ್ಲಿ ಕಳೆದ ಹತ್ತು ವರ್ಷಗಳಿಂದ ಸಿಪಿಐ (ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎಲ್‌ಡಿಎಫ್‌) ಆಳ್ವಿಕೆ. ಅಲ್ಲಿ ಈಗ ಬದಲಾವಣೆಯ ಗಾಳಿ.
communist flag (file photo)
ಕಮ್ಯುನಿಸ್ಟ್ ಧ್ವಜ (ಸಂಗ್ರಹ ಚಿತ್ರ)online desk
Updated on

ರಾಷ್ಟ್ರಮಟ್ಟದಲ್ಲಿ ಬಿಜೆಪಿ, ಕಾಂಗ್ರೆಸ್‌ ಮುಖಾಮುಖಿ ಆಗಿರಬಹುದು. ಒಬ್ಬರ ಗೆಲುವು ಮತ್ತೊಬ್ಬರ ಸೋಲಾಗಿರಬಹುದು. ಆದರೆ, ಕೇರಳ ರಾಜ್ಯದ ಮೂರು ಹಂತಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬ್ಬರ ಸೋಲು ಇವರಿಬ್ಬರ ಗೆಲುವಾಗಿದೆ. ಕಮ್ಯುನಿಸ್ಟರ ಹಿನ್ನಡೆ ಇವರಿಬ್ಬರ ಮುನ್ನಡೆಗೆ ಕಾರಣವಾಗಿದೆ. ಅಲ್ಲಿ ಈ ಎರಡೂ ರಾಷ್ಟ್ರೀಯ ಪಕ್ಷಗಳು ಏಕಕಾಲದಲ್ಲಿ ವಿಜಯೋತ್ಸವದ ಸಂಭ್ರಮದಲ್ಲಿದೆ.

ಕೇರಳದಲ್ಲಿ ಕಳೆದ ಹತ್ತು ವರ್ಷಗಳಿಂದ ಸಿಪಿಐ (ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎಲ್‌ಡಿಎಫ್‌) ಆಳ್ವಿಕೆ. ಅಲ್ಲಿ ಈಗ ಬದಲಾವಣೆಯ ಗಾಳಿ. ಡಿಸೆಂಬರ್‌ 13 ರಂದು ಪ್ರಕಟವಾದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಿಂದ ಸರಕಾರದ ವಿರೋಧಿ ಅಲೆ ಇರುವುದು ಸ್ಪಷ್ಟ. ಚುನಾವಣೆಗೆ ಕೆಲವು ತಿಂಗಳ ಮುನ್ನ ಜಾರಿಗೊಂಡ ಎಲ್‌ಡಿಎಫ್ ಸರಕಾರದ ಕಲ್ಯಾಣ ಕಾರ್ಯಕ್ರಮಗಳೂ ಕೈಹಿಡಿದಿಲ್ಲ. ಕಮ್ಯುನಿಸ್ಟರ ಕೆಂಪು ಕೋಟೆಯ ತಳಪಾಯ ಕುಸಿಯುತ್ತಿದೆ.

ಕೇರಳದಲ್ಲಿ ಏಪ್ರಿಲ್‌ ಅಥವಾ ಮೇ 2026ಕ್ಕೆ ಅಸೆಂಬ್ಲಿ ಎಲೆಕ್ಷನ್‌. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮಿಫೈನಲ್‌ ಎಂದೇ ಬಿಂಬಿತ. ಸೆಮಿಫೈನಲ್‌ ಫಲಿತಾಂಶ ಪ್ರಕಟ. ಫೈನಲ್‌ಗೆ ಅಖಾಡ ಸಜ್ಜು. ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ (ಯುಡಿಎಫ್‌) ಹಾಗೂ ಬಿಜೆಪಿ ಮುಂದಾಳತ್ವದ ಎನ್‌ಡಿಎಗೆ ಹೊಸ ಹುರುಪು. ಎಲ್‌ಡಿಎಫ್‌ ಮಂಕು.

ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಿಂದ ಆಡಳಿತಾರೂಢ ಎಲ್‌ಡಿಎಫ್‌ಗೆ ದೊಡ್ಡ ಶಾಕ್. ಕಮ್ಯುನಿಸ್ಟ್‌ ನಾಯಕರಿಗೆ ಕೆಂಪು ಕೋಟೆ ಕುಸಿಯುತ್ತಿರುವ ಅನುಭವ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಬಗ್ಗೆ ಆತ್ಮಾವಲೋಕನದ ಮಾತು. ಅಪಾಯದ ಕರೆಗಂಟೆಗೆ ಎಚ್ಚರ.

ಶಬರಿಮಲೆ ದೇವಸ್ಥಾನದ ಚಿನ್ನ ಕಳುವಿನ ಪ್ರಕರಣ ಚುನಾವಣೆಯಲ್ಲಿ ಹಿನ್ನಡೆಗೆ ಕಾರಣ ಎಂಬುದು ಆಡಳಿತದಲ್ಲಿರುವ ಸಿಪಿಎಂ ಭಾವನೆ. ಎಲ್‌ಡಿಎಫ್‌ ನಿಂದ ಎಲ್ಲಿ ತಪ್ಪಾಗಿದೆ ಎಂದು ತಿಳಿಸುವಂತೆ ಸಿಪಿಐ ಕಾರ್ಯದರ್ಶಿ ಬಿನಾಯ್‌ ವಿಶ್ವಂ ಅವರಿಂದ ಸಾಮಾಜಿಕ ಜಾಲತಾಣದಲ್ಲಿ ಜನತೆಗೆ ಮನವಿ. ತಪ್ಪನ್ನು ಸರಿಪಡಿಸಿಕೊಂಡು ಅಸೆಂಬ್ಲಿ ಚುನಾವಣೆಯಲ್ಲಿ ಮತ್ತೆ ಗೆಲ್ಲುವ ವಿಶ್ವಾಸ ಕಮ್ಯುನಿಸ್ಟರದು.

ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವು ಕೇರಳದಲ್ಲಿ ಕಳೆದ ಹತ್ತು ವರ್ಷಗಳ ಎಲ್‌ಡಿಎಫ್‌ ಆಳ್ವಿಕೆಯ ಅಂತ್ಯದ ಸೂಚನೆ ಎಂಬುದು ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಅವರ ಅಭಿಮತ. ಬಿಜೆಪಿಯ ಸ್ಲೋಗನ್‌ ವಿಕಸಿತ ಕೇರಳಂ.

ಆಡಳಿತಾರೂಢ ಎಲ್‌ಡಿಎಫ್‌ ಕಂಗಾಲಾಗಲು ಕಾರಣಗಳಿವೆ. ಆರರಲ್ಲಿ ನಾಲ್ಕು ಪಾಲಿಕೆಗಳಲ್ಲಿ ಅಧಿಕಾರ ನಷ್ಟ. ಒಂದು ಪಾಲಿಕೆಯಲ್ಲಿ ಮಾತ್ರ ಜಯ. ಎಲ್‌ಡಿಎಫ್‌ ಮೊದಲು 14 ಜಿಲ್ಲಾ ಪಂಚಾಯಿತಿಗಳಲ್ಲಿ 11ರಲ್ಲಿ ಪಾರುಪತ್ಯ. ಈಗ ಇದು ಏಳಕ್ಕೆ ಕುಸಿತ. ಗ್ರಾಮ ಪಂಚಾಯಿತಿಗಳಲ್ಲಿ 941ರಲ್ಲಿ 341ರಲ್ಲಿ ಮಾತ್ರ ಗೆಲುವು. ಬ್ಲಾಕ್‌ ಪಂಚಾಯಿತಿಗಳಲ್ಲಿ ಶೇಕಡಾ 50ರಷ್ಟು ಹಾಗೂ 20 ಮುನಿಸಿಪಾಲಿಟಿಗಳಲ್ಲಿ ಸೋಲು. ಆಡಳಿತದಲ್ಲಿ ಎಡಪಕ್ಷಗಳು ಎಡವಿರುವುದಕ್ಕೆ ಇದು ನಿದರ್ಶನ.

ಎಲ್‌ಡಿಎಫ್‌ ಸೋತ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇದು ಎಡಪಂಥೀಯರ ಚಿಂತೆಗೆ ಮತ್ತಷ್ಟು ಕಾರಣ. ಅಲ್ಪಸಂಖ್ಯಾತರ ಮತಗಳು ಕೆಲವೆಡೆ ಕಾಂಗ್ರೆಸ್‌ ಮುಂದಾಳತ್ವದ ಯುಡಿಎಫ್‌ ಕಡೆ ಕ್ರೂಢೀಕರಣ. ಇದು ಫಲಿತಾಂಶದಿಂದ ವ್ಯಕ್ತ. ತಳಮಟ್ಟದಲ್ಲಿ ಎಡಪಕ್ಷಗಳ ಕೋಟೆ ಬಿರುಕು ಬಿಟ್ಟಿರುವುದಕ್ಕೆ ಇದು ಸಾಕ್ಷಿ.

communist flag (file photo)
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಚರ್ಚೆ ಮತ್ತು ಸಿಎಂ ಕುರ್ಚಿ ಕಿತ್ತಾಟದ ನೆರಳು (ನೇರ ನೋಟ)

ತಿರುವನಂತಪುರಂ, ಕೊಲ್ಲಂ, ಕೊಚ್ಚಿ, ತ್ರಿಚೂರ್‌ ಈ ಎಲ್ಲ ಪಾಲಿಕೆಗಳನ್ನೂ ಎಲ್‌ಡಿಎಫ್‌ 2020ರಲ್ಲಿ ಗೆದ್ದಿತ್ತು. ಈ ಬಾರಿ ಸೋತಿದೆ. ಎಲ್‌ಡಿಎಫ್ ಗೆ ತನ್ನ ಸಾಂಪ್ರದಾಯಿಕ ಮತಗಳಿರುವ ಕೊಲ್ಲಂನಂತಹ ಪ್ರದೇಶಗಳಲ್ಲೇ ಈ ಬಾರಿ ಮುಖಭಂಗ. ಕೆಲವು ಪ್ರದೇಶಗಳಲ್ಲಿ ಧರ್ಮದ ಆಧಾರದ ಮೇಲೆ ಮತಗಳ ಧ್ರುವೀಕರಣ. ಬಿಜೆಪಿಯ ನೆಲೆ ವಿಸ್ತರಣೆ.

ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಆರು ಪಾಲಿಕೆಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿದೆ. ಏಳು ಜಿಲ್ಲಾ ಪಂಚಾಯಿತಿಗಳು ವಶವಾಗಿವೆ. ಮುನಿಸಿಪಾಲಿಟಿಗಳಲ್ಲಿ 87ರಲ್ಲಿ 54ರಲ್ಲಿ ಗೆಲುವು. 79 ಬ್ಲಾಕ್‌ ಪಂಚಾಯಿತಿಗಳು, 505 ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಸ್ಥಾಪನೆ. ಯುಡಿಎಫ್‌ ತನ್ನ ಹಿಂದಿನ ಶಕ್ತಿಯನ್ನು ಪಡೆದುಕೊಳ್ಳುತ್ತಿದೆ. ಇದು ಫಲಿತಾಂಶದಿಂದ ಸ್ಪಷ್ಟ.

ನಗರ ಪ್ರದೇಶಗಳ ಮತದಾರರು ಎಡಪಕ್ಷಗಳಿಗೆ ಕೈಕೊಟ್ಟು ಯುಡಿಎಫ್‌ ಕೈ ಹಿಡಿದಿದ್ದಾರೆ. ಕೆಲವು ಕಡೆ ಎನ್‌ಡಿಎಗೆ ಒಲವು ತೋರಿದ್ದಾರೆ. ಎಡಪಕ್ಷಗಳು ಸಾಂಪ್ರದಾಯಿಕವಾಗಿ ಶಕ್ತಿಯುತವಾಗಿದ್ದ ಕ್ಷೇತ್ರಗಳನ್ನು ಈ ಬಾರಿ ಕಳೆದುಕೊಂಡಿರುವುದು ಹೊಸ ವಿದ್ಯಮಾನ.

ಕೇರಳದ ರಾಜಧಾನಿ ತಿರುವನಂತಪುರ. ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಕಳೆದ 40 ವರ್ಷಗಳಿಂದ ಎಲ್‌ಡಿಎಫ್‌ನದೇ ಅಧಿಪತ್ಯ. ಈ ಚುನಾವಣೆಯಲ್ಲಿ ಇದು ಅಂತ್ಯ. ಬಿಜೆಪಿ ನೇತೃತ್ವದ ಎನ್‌ಡಿಎ ಐತಿಹಾಸಿಕ ವಿಜಯ. ಇದರಿಂದ ಇಡೀ ರಾಜ್ಯದಲ್ಲಿ ಬಿಜೆಪಿಗೆ ನವೋಲ್ಲಾಸ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಈ ವಿಜಯಕ್ಕೆ ಸಂತಸ ವ್ಯಕ್ತಪಡಿಸಿರುವುದು ಬಿಜೆಪಿಗೆ ಈ ಗೆಲುವು ಎಷ್ಟು ಮಹತ್ವ ಎಂಬುದನ್ನು ಸಾರಿ ಹೇಳುತ್ತದೆ.

ತಿರುವನಂತರಪುರ ಮಹಾನಗರಪಾಲಿಕೆಯ 101 ಸ್ಥಾನಗಳಲ್ಲಿ ಎನ್‌ಡಿಎ 50 ಸ್ಥಾನಗಳಲ್ಲಿ ವಿಜಯದ ಪತಾಕೆ ಹಾರಿಸಿದೆ. ಸರಳ ಬಹುಮತಕ್ಕೆ ಒಂದು ಸ್ಥಾನ ಕೊರತೆ. ಎಲ್‌ಡಿಎಫ್‌ 29, ಯುಡಿಎಫ್‌ 19 ವಾರ್ಡ್‌ಗಳಲ್ಲಿ ನಗೆ ಬೀರಿದೆ. ಎಲ್‌ಡಿಎಫ್‌ ಕಳೆದ ಚುನಾವಣೆಯಲ್ಲಿ 51 ವಾರ್ಡ್‌ಗಳನ್ನು ಗೆದ್ದುಕೊಂಡಿತ್ತು. ಎನ್‌ಡಿಎ ಆಗ 34 ವಾರ್ಡ್‌ಗಳನ್ನು ಗೆದ್ದು ಪ್ರತಿಪಕ್ಷ ಸ್ಥಾನದಲ್ಲಿತ್ತು.

ತಿರುವನಂತಪುರದ ಕಾಂಗ್ರೆಸ್ ಲೋಕಸಭಾ ಸದಸ್ಯ ಶಶಿ ತರೂರ್‌ ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಗೆಲುವಿಗೆ ಅಭಿನಂದಿಸಿದ್ದಾರೆ. ತಿರುವನಂತಪುರದ ಬಿಜೆಪಿ ಗೆಲುವನ್ನು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ್ದಾರೆ. ಶಶಿ ತರೂರ್‌ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಕಡೆ ವಾಲಿರುವುದು ಗೊತ್ತಿರುವ ಸಂಗತಿ.

ಬಿಜೆಪಿ ಕೇರಳದ ವಿವಿಧ ಪ್ರದೇಶಗಳಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳುತ್ತಿರುವುದು ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೋಚರಿಸಿದೆ. ಕೇರಳದಲ್ಲಿ ಕಾಂಗ್ರೆಸ್‌ ನೆಲೆ ಇರುವ ಕಡೆ ಬಿಜೆಪಿಯ ಕಮಲ ಅರಳಬಹುದು ಎಂದು ಭಾವಿಸಲಾಗಿತ್ತು. ಆದರೆ, ಫಲಿತಾಂಶ ಗಮನಿಸಿದರೆ ಕಮ್ಯುನಿಸ್ಟರ ಕೋಟೆಯನ್ನೂ ಕೇಸರಿ ಪಕ್ಷ ಭೇದಿಸಿದೆ. ಕಾಂಗ್ರೆಸ್‌ ಪುಟಿದೆದ್ದಿದೆ. ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣವು ಎಲ್‌ಡಿಎಫ್‌ ಸರಕಾರಕ್ಕೆ ಚುನಾವಣೆಯಲ್ಲಿ ಹೊಡೆತ ನೀಡಿದೆ.

ಕೇರಳದಲ್ಲಿ ಇನ್ನು ಕೆಲವು ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ. ಆ ರಾಜ್ಯದಲ್ಲಿ 140 ಅಸೆಂಬ್ಲಿ ಕ್ಷೇತ್ರಗಳಿವೆ. ಅಸೆಂಬ್ಲಿಗೆ 2016ರಲ್ಲಿ ನಡೆದ ಚುನಾವಣೆಯಲ್ಲಿ ಎಲ್‌ಡಿಎಫ್ 82 (ಸಿಪಿಐ (ಎಂ) 58, ಸಿಪಿಐ 19, ಇತರರು 5) ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಆಗ ಕಾಂಗ್ರೆಸ್‌ 22, ಐಯುಎಂಎಲ್ 18, ಜೆಡಿಎಸ್‌ 3, ಬಿಜೆಪಿ ಒಂದು ಕ್ಷೇತ್ರಗಳಲ್ಲಿ ಗೆಲುವು ಪಡೆದಿತ್ತು. ಸಿಪಿಐ (ಎಂ) ಶೇ.26.55, ಸಿಪಿಐ ಶೇ.8.12, ಕಾಂಗ್ರೆಸ್‌ ಶೇ.23.70, ಬಿಜೆಪಿ ಶೇ. 10.53, ಐಯುಎಂಎಲ್ ಶೇ.7.40 ಮತ ಗಳಿಸಿತ್ತು.

communist flag (file photo)
Power Sharing: ಸಿದ್ದರಾಮಯ್ಯ ಅವರನ್ನು ನಿಭಾಯಿಸುವುದೇ ಹೈಕಮಾಂಡ್‌? (ನೇರ ನೋಟ)

ಕಳೆದ 2021ರ ಅಸೆಂಬ್ಲಿ ಚುನಾವಣೆಯಲ್ಲಿ ಸಿಪಿಎಂ 62, ಸಿಪಿಐ 17, ಕಾಂಗ್ರೆಸ್ 21, ಐಯುಎಂಎಲ್ 15, ಪಕ್ಷೇತರರು 6, ಕೇರಳ ಕಾಂಗ್ರೆಸ್ (ಎಂ) 5, ಜೆಡಿಎಸ್‌ 2 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಸಿಪಿಐ (ಎಂ) ಪಡೆದ ಶೇಕಡಾವಾರು ಮತಪ್ರಮಾಣ 25.38 ಇತ್ತು. ಕಾಂಗ್ರೆಸ್‌ ಶೇ.25.12, ಬಿಜೆಪಿ ಶೇ.11.3, ಐಯುಎಂಎಲ್ ಶೇ.8.3, ಸಿಪಿಐ ಶೇ.7.58ರಷ್ಟು ಮತ ಪಡೆದಿತ್ತು.

ಕೇರಳದಲ್ಲಿ ಬಿಜೆಪಿ ದಶಕಗಳಿಂದ ಶೇಕಡಾವಾರು ಮತಗಳನ್ನು ಹೆಚ್ಚಿಸಿಕೊಂಡು ಬರುತ್ತಿದೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಹೆಚ್ಚಾದ ಮತಗಳ ಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಅಸೆಂಬ್ಲಿ ಚುನಾವಣೆಯಲ್ಲಿ ಇದು ಸಾಧ್ಯವಾಗುತ್ತಿಲ್ಲ.

ಲೋಕಸಭೆಗೆ 2014ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಶೇ.10.33 ಮತಗಳನ್ನು ಪಡೆಯಿತು. ಇದು 2019ರಲ್ಲಿ ಶೇ.13ಕ್ಕೆ, 2024ರಲ್ಲಿ ಶೇ.16.68ಕ್ಕೆ ಜಿಗಿಯಿತು. ಆದರೆ, ಅಸೆಂಬ್ಲಿ ಚುನಾವಣೆಗಳಲ್ಲಿ ಈ ಏರಿಕೆ ಲೋಕಸಭಾ ಚುನಾವಣೆಗಳ ಪ್ರಮಾಣದಲ್ಲಿ ಆಗಿಲ್ಲ. ಲೋಕಸಭೆಗೆ 2019ರಲ್ಲಿ ಶೇ.13ರಷ್ಟು ಮತ ಪಡೆದ ಬಿಜೆಪಿಗೆ ನಂತರದ ಅಸೆಂಬ್ಲಿ ಚುನಾವಣೆಯಲ್ಲಿ ಶೇ.11.30ರಷ್ಟು ಮತಗಳನ್ನು ಮಾತ್ರ ಸೆಳೆಯಲು ಸಾಧ್ಯವಾಯಿತು.

ಕೇರಳದಲ್ಲಿ ಎಲ್‌ಡಿಎಫ್‌ ಹಾಗೂ ಯುಡಿಎಫ್‌ ನಡುವಿನ ನೇರ ಹೋರಾಟವನ್ನು ಭೇದಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಭಗೀರಥ ಪ್ರಯತ್ನ ನಡೆಸಿದೆ. ಆ ಪ್ರಯತ್ನದಲ್ಲಿ ಸ್ವಲ್ಪಮಟ್ಟಿನ ಯಶಸ್ಸು ಸಾಧಿಸಿದೆ. ಆದರೆ, ಎಡರಂಗ ವಿರೋಧಿ ಮತಗಳಲ್ಲಿ ಹೆಚ್ಚು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಕಡೆ ಒಲವು ತೋರಿದೆ. ಎಡರಂಗ ಸರಕಾರದ ವೈಫಲ್ಯಗಳು ಎನ್‌ಡಿಎಗಿಂತ ಕಾಂಗ್ರೆಸ್‌ ಸಾರಥ್ಯದ ಯುಡಿಎಫ್‌ ಗೆ ಹೆಚ್ಚು ವರವಾಗಿದೆ. ಕೇರಳದಲ್ಲಿ 2026ರಲ್ಲಿ ವಿಧಾನಸಭಾ ಚುನಾವಣೆ. ಅದು ಈಗಲೇ ಕುತೂಹಲದ ಕಣ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com