

ಭುವನೇಶ್ವರ: ಒಡಿಶಾದಲ್ಲಿ ಮತ್ತೊಂದು ಬೃಹತ್ ನಕ್ಸಲ್ ಎನ್ಕೌಂಟರ್ ನಡೆದಿದ್ದು, ಬರೊಬ್ಬರಿ 1.1 ಕೋಟಿ ರೂ ಇನಾಮು ಹೊಂದಿದ್ದ ನಕ್ಸಲ್ ನಾಯಕ ಗಣೇಶ್ ಉಯ್ಕೆ ಸೇರಿ ನಾಲ್ವರನ್ನು ಹೊಡೆದುರುಳಿಸಲಾಗಿದೆ.
ಒಡಿಶಾದ ಕಂಧಮಾಲ್‌ನಲ್ಲಿ ಭದ್ರತಾ ಪಡೆಗಳ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಕುಖ್ಯಾತ ನಕ್ಸಲ್ ನಾಯಕ ಗಣೇಶ್ ಉಯ್ಕೆ ಸೇರಿದಂತೆ 4 ಮಂದಿ ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಿಗ್ಗೆ 9 ಗಂಟೆಗೆ, ಭದ್ರತಾ ಪಡೆಗಳು ರಂಭಾ ಅರಣ್ಯ ವ್ಯಾಪ್ತಿಯಲ್ಲಿ ಸಶಸ್ತ್ರ ಮಾವೋವಾದಿ ಪಡೆಯನ್ನು ಎದುರಿಸಿತು. ಈ ವೇಳೆ ಮಾವೋವಾದಿಗಳು ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಭದ್ರತಾ ಸಿಬ್ಬಂದಿಗಳೂ ಕೂಡ ಪ್ರತಿ ದಾಳಿ ನಡೆಸಿದರು.
ಮಧ್ಯಾಹ್ನದ ಹೊತ್ತಿಗೆ, ಭದ್ರತಾ ಪಡೆಗಳು ಗಣೇಶ್ ಉಯ್ಕೆ ಸೇರಿದಂತೆ ನಾಲ್ವರು ಮಾವೋವಾದಿಗಳ ಮೃತದೇಹಗಳನ್ನು ಸ್ಥಳದಿಂದ ವಶಪಡಿಸಿಕೊಂಡವು. ಭದ್ರತಾ ಸಿಬ್ಬಂದಿ ಎರಡು INSAS ರೈಫಲ್‌ಗಳು ಮತ್ತು .303 ರೈಫಲ್ ಸೇರಿದಂತೆ ಹೆಚ್ಚಿನ ಸಾಮರ್ಥ್ಯದ ಶಸ್ತ್ರಾಸ್ತ್ರಗಳನ್ನು ಸ್ಥಳದಿಂದ ವಶಪಡಿಸಿಕೊಂಡರು.
ಚಕಪಾಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಗುಂಡಿನ ಕಾಳಗದಲ್ಲಿ ಹತನಾದ ಒಬ್ಬ ನಕ್ಸಲನನ್ನು 69 ವರ್ಷದ ಉಯಿಕೆ ಎಂದು ಗುರುತಿಸಲಾಗಿದೆ. ಆತನನ್ನು ಪಕ್ಕ ಹನುಮಂತು ಎಂದೂ ಕರೆಯಲಾಗುತ್ತದೆ.
ಗಣೇಶ್ ಅವರು ತೆಲಂಗಾಣದ ಚೆಂದೈರ್ ಮಂಡಲದ ಪುಲ್ಲೆಮಲ ಹಳ್ಳಿಯ ನಿವಾಸಿಯಾಗಿದ್ದಾರೆ. ಅಂತೆಯೇ ಎನ್ಕೌಂಟರ್ ನಲ್ಲಿ ಹತರಾದ ಮೂವರು ನಕ್ಸಲರ ಮೂಲ ಇನ್ನಷ್ಟೇ ತಿಳಿಯಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತಂತೆ ಎಕ್ಸ್ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ನಕ್ಸಲ್ ಮುಕ್ತ ಭಾರತದತ್ತ ಮಹತ್ವದ ಮೈಲಿಗಲ್ಲು’ ಎಂದು ಬಣ್ಣಿಸಿದ್ದಾರೆ. ಈ ಕಾರ್ಯಾಚರಣೆಯ ಮೂಲಕ ಒಡಿಶಾ ಸಂಪೂರ್ಣ ನಕ್ಸಲ್ ಮುಕ್ತ ರಾಜ್ಯವಾಗುವತ್ತ ಸಾಗಿದೆ. ಮಾರ್ಚ್ 31ರ ಹೊತ್ತಿಗೆ ಇದನ್ನು ಸಾಧಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
1.1ಕೋಟಿ ರೂ ಇನಾಮು ಹೊಂದಿದ್ದ ನಕ್ಸಲ್ ನಾಯಕ
ರಾಜ್ಯದಲ್ಲಿ ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ಕೇಂದ್ರ ಸಮಿತಿ ಸದಸ್ಯರಾದ ಉಯಿಕೆ ಬಗ್ಗೆ ಮಾಹಿತಿ ನೀಡಿದವರಿಗೆ 1.1 ಕೋಟಿ ಬಹುಮಾನ ಘೋಷಿಸಲಾಗಿತ್ತು ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಅಧಿಕಾರಿ ತಿಳಿಸಿದ್ದಾರೆ.
"ಇದು ನಮ್ಮ ಪಡೆಗಳಿಗೆ ಐತಿಹಾಸಿಕ ಯಶಸ್ಸು. 1.1 ಕೋಟಿ ರೂ. ಬಹುಮಾನದ ನಾಯಕನ ನಿರ್ಮೂಲನೆ ಈ ಪ್ರದೇಶದಲ್ಲಿ ಮಾವೋವಾದಿ ಸಾಂಸ್ಥಿಕ ರಚನೆಯ ಬೆನ್ನೆಲುಬನ್ನು ಮುರಿಯುತ್ತದೆ" ಎಂದು ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುವ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
Advertisement