

ಭೋಪಾಲ್: ಬಿಜೆಪಿ ಕೌನ್ಸಿಲರ್ ಒಬ್ಬರ ಪತಿ ಮಹಿಳೆಯೊಬ್ಬರ ಮೇಲೆ ಚಾಕು ತೋರಿಸಿ ಅತ್ಯಾಚಾರ ಎಸಗಿ, ಅದರ ವಿಡಿಯೋ ಮಾಡಿ, ನಂತರ ಅದನ್ನು ತೋರಿಸಿ ಪದೇ ಪದೇ ಲೈಂಗಿಕ ಸಂಬಂಧ ಹೊಂದುವಂತೆ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ.
ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯ ರಾಂಪುರ ಬಘೇಲನ್ ನಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯ ಕಾಟಕ್ಕೆ ಬೇಸತ್ತ ಮಹಿಳೆ ಆತನ ಬಳಿ ಮಾತನಾಡುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಅದರದಲ್ಲಿ ಆತ ನೀನು ನನಗೇನೂ ಮಾಡಲಾಗುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.
ಈ ಅತ್ಯಾಚಾರ ಆರೋಪಿಯನ್ನು ಅಶೋಕ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ರಾಂಪುರ ಬಘೇಲನ್ ನಗರ ಪರಿಷತ್ತಿನ ಬಿಜೆಪಿ ಕೌನ್ಸಿಲರ್ ಪತಿ ಎಂದು ತಿಳಿದು ಬಂದಿದೆ. ಅಶೋಕ್ ಸಿಂಗ್ ಪೊಲೀಸ್ ಅಧಿಕಾರಿಯನ್ನು ನಿಂದಿಸುತ್ತಿರುವ ಮತ್ತು ಸಂತ್ರಸ್ತ ಮಹಿಳೆಗೆ ಬೆದರಿಕೆ ಹಾಕುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಇದು ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ, ಆರೋಪಿಯು "ನನಗೆ ಏನಾಗುತ್ತದೆ? ಏನೂ ಆಗುವುದಿಲ್ಲ. ನೀನು ಎಲ್ಲಿ ಬೇಕಾದರೂ ದೂರು ಕೊಡು, ನನಗೆ ಏನೂ ಆಗುವುದಿಲ್ಲ" ಎಂದು ಹೇಳುತ್ತಿರುವುದು ಕೇಳಿಬರುತ್ತಿದೆ. ಆದರೆ ಹಿನ್ನೆಲೆಯಲ್ಲಿ ಮಹಿಳೆ ಅಳುತ್ತಾ ದೂರು ದಾಖಲಿಸುವ ಬಗ್ಗೆ ಮಾತನಾಡುತ್ತಿರುವುದು ಕೇಳಿಸುತ್ತದೆ.
6 ತಿಂಗಳ ಹಿಂದಿನ ಕೃತ್ಯ
ಇನ್ನು ಅಶೋಕ್ ಸಿಂಗ್ 6 ತಿಂಗಳ ಹಿಂದೆ ಸಂತ್ರಸ್ಥ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ. ಅಲ್ಲದೆ ತನ್ನ ನೀಚ ಕೃತ್ಯದವನ್ನು ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡಿದ್ದ. ಈ ವಿಡಿಯೋ ತೋರಿಸಿ ಆಕೆಗೆ ಬೆದರಿಕೆ ಹಾಕಿ ಪದೇ ಪದೇ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಎಂದು ಸಂತ್ರಸ್ಥ ಮಹಿಳೆ ಆರೋಪಿಸಿದ್ದಾಳೆ.
ಅಪರಾಧ ಸುಮಾರು ಆರು ತಿಂಗಳ ಹಿಂದೆ ನಡೆದಿದ್ದು, ತನ್ನ ಜೀವ ಮತ್ತು ಕುಟುಂಬಕ್ಕೆ ಬೆದರಿಕೆ ಇರುವುದರಿಂದ ತಾನು ಮೌನವಾಗಿದ್ದೆ ಎಂದು ಆರೋಪಿಸಿ ಮಹಿಳೆ ಸೋಮವಾರ ಸತ್ನಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹಂಸರಾಜ್ ಸಿಂಗ್ ಅವರಿಗೆ ಲಿಖಿತ ದೂರು ಸಲ್ಲಿಸಿದರು. ಎಸ್‌ಪಿ ತಕ್ಷಣ ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ತ್ರಿವೇದಿ ಅವರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಮನೆಗೇ ನುಗ್ಗಿ ಚಾಕು ತೋರಿಸಿ ಅತ್ಯಾಚಾರ
ಮಹಿಳೆಯ ದೂರಿನ ಪ್ರಕಾರ, ಕರ್ಹಿ ನಿವಾಸಿ ಅಶೋಕ್ ಸಿಂಗ್ ಆಕೆಯ ಮನೆಗೆ ನುಗ್ಗಿ, ಚಾಕು ತೋರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ತನ್ನ ಮೊಬೈಲ್ ಫೋನ್‌ನಲ್ಲಿ ಕೃತ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಲ್ಲದೆ, ಘಟನೆಯ ಬಗ್ಗೆ ಹೇಳಿದರೆ ಆಕೆ ಮತ್ತು ಆಕೆಯ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.
ಸಿಂಗ್ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಈ ಹಿಂದೆ ಜಿಲ್ಲೆಯಿಂದ ಬಹಿಷ್ಕರಿಸಲ್ಪಟ್ಟಿದ್ದ ಎಂದು ಆಕೆ ಹೇಳಿಕೊಂಡಿದ್ದಾಳೆ. ಸಿಂಗ್ ನಿಯಮಿತವಾಗಿ ತನ್ನ ಅಂಗಡಿಗೆ ಬರುತ್ತಾನೆ, ಅವಳನ್ನು ನಿಂದಿಸುತ್ತಾನೆ ಮತ್ತು ಬೆದರಿಕೆ ಹಾಕುತ್ತಾನೆ ಎಂದು ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
Advertisement