ಬಿಜೆಪಿ-ಆರ್‌ಎಸ್‌ಎಸ್ ಹೊಗಳಿದ ದಿಗ್ವಿಜಯ್ ಸಿಂಗ್; ಪಕ್ಷದ ಸಂಘಟನೆ ಬಲಪಡಿಸಬೇಕು, ಯಾವುದೇ ಸಂದೇಹವಿಲ್ಲ: ಶಶಿ ತರೂರ್
ನವದೆಹಲಿ: ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದೊಳಗಿನ (ಆರ್‌ಎಸ್‌ಎಸ್) ಸಂಘಟನೆ ಬಗ್ಗೆ ಹೊಗಳಿಕೆಯ ಹಿನ್ನೆಲೆಯಲ್ಲಿ, ಪಕ್ಷದೊಳಗೆ ಸುಧಾರಣೆಗಳನ್ನು ತರಬೇಕೆಂದು ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಬೆಂಬಲಿಸಿದ್ದಾರೆ.
ನೆಲದ ಮೇಲೆ ಕುಳಿತುಕೊಳ್ಳುವ ತಳಣಟ್ಟದ ಕಾರ್ಯಕರ್ತರು ಸಂಘ ಪರಿವಾರ ಮತ್ತು ಬಿಜೆಪಿಯ ರಾಜಕೀಯ ಪರಿಸರದಲ್ಲಿ ಹೇಗೆ ಬೆಳೆದು ಮುಖ್ಯಮಂತ್ರಿ ಮತ್ತು ಪ್ರಧಾನಿ ಆಗಬಹುದು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ನಿದರ್ಶನ. ಇದಕ್ಕೆ ಪೂರಕವಾಗಿ 1990ರ ದಶಕದಲ್ಲಿ ಗುಜರಾತಿನ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಅವರ ಮುಂದೆ ನೆಲದ ಮೇಲೆ ಕುಳಿತಿದ್ದ ನರೇಂದ್ರ ಮೋದಿ ಅವರ ಫೋಟೊವನ್ನು ದಿಗ್ವಿಜಯ್ ಸಿಂಗ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಟ್ಯಾಗ್ ಮಾಡಿ ಸಿಂಗ್ ಅವರು ಕಾಂಗ್ರೆಸ್‌ನೊಳಗೆ ಸುಧಾರಣೆಗಳ ಅಗತ್ಯ ಮತ್ತು ಅಧಿಕಾರದ ವಿಕೇಂದ್ರೀಕರಣವನ್ನು ಎತ್ತಿ ತೋರಿಸಿದ್ದರು. ಹಿರಿಯ ನಾಯಕರೊಬ್ಬರ ಸಾರ್ವಜನಿಕ ಹೇಳಿಕೆ ಕಾಂಗ್ರೆಸ್ ಅನ್ನು ಮುಜುಗರಕ್ಕೀಡು ಮಾಡಿದ್ದರೂ, ಇದು ಅನುಭವಿ ನಾಯಕರಲ್ಲಿ ಹೆಚ್ಚುತ್ತಿರುವ ಅಸಮಾಧಾನವನ್ನು ಎತ್ತಿ ತೋರಿಸಿತ್ತು.
ಸಿಂಗ್ ನಿನ್ನೆ ಆನ್‌ಲೈನ್ ಪೋಸ್ಟ್‌ನಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಹೊಗಳಿದ ನಂತರ ವಿವಾದ ಭುಗಿಲೆದ್ದಿತು. ಸಿಂಗ್ ನಂತರ ತಾನು ಸಂಘಟನೆಯನ್ನಷ್ಟೇ ಹೊಗಳಿದ್ದೇನೆ. ಆದರೆ, ಆರ್‌ಎಸ್‌ಎಸ್-ಬಿಜೆಪಿಯ ಕಟ್ಟಾ ವಿರೋಧಿಯಾಗಿಯೇ ಉಳಿದಿದ್ದೇನೆ ಎಂದು ಸ್ಪಷ್ಟಪಡಿಸಿದರು. ಹೆಚ್ಚಿನ ಸಂಖ್ಯೆಯ ನಾಯಕರು ಸಿಂಗ್ ಪರವಾಗಿ ಮಾತನಾಡಿದರು. ಆದಾಗ್ಯೂ, ಕಾಂಗ್ರೆಸ್ ಸಂಘ ಸಿದ್ಧಾಂತ ಮತ್ತು 'ಗಾಂಧಿ ಹಂತಕರ' ಬಗ್ಗೆ ಭಿನ್ನಾಭಿಪ್ರಾಯ ಹೊಂದಿದೆ ಎಂದು ಪ್ರತಿಪಾದಿಸಿತು.
ದಿಗ್ವಿಜಯ್ ಸಿಂಗ್ ಅವರೊಂದಿಗೆ ಮಾತನಾಡಿದ್ದೀರಾ ಮತ್ತು ಪಕ್ಷದೊಳಗಿನ ಸುಧಾರಣೆಗಳಿಗಾಗಿ ಅವರ ಕರೆಗಳನ್ನು ಬೆಂಬಲಿಸುತ್ತೀರಾ ಎಂದು ಕೇಳಿದಾಗ, ಕಾಂಗ್ರೆಸ್ ಜೊತೆಗಿನ ಭಿನ್ನಾಭಿಪ್ರಾಯಗಳ ಕುರಿತು ಆಗಾಗ್ಗೆ ಸುದ್ದಿಯಲ್ಲಿರುವ ಶಶಿ ತರೂರ್, 'ನಾವು ಸ್ನೇಹಿತರು, ಮತ್ತು ಸಂಭಾಷಣೆ ನಡೆಸುವುದು ಸಹಜ. ಸಂಘಟನೆಯನ್ನು ಬಲಪಡಿಸಬೇಕು- ಅದರ ಬಗ್ಗೆ ಯಾವುದೇ ಸಂದೇಹವಿಲ್ಲ' ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಮಗೆ 140 ವರ್ಷಗಳ ಇತಿಹಾಸವಿದೆ; ನಾವು ಕಲಿಯಲು ಬಹಳಷ್ಟಿದೆ. ಸಂಘಟನೆಯೂ ಬಲವಾಗಿರಬೇಕೆಂದು ನಾನು ಬಯಸುತ್ತೇನೆ. ಶಿಸ್ತು ಅತ್ಯಗತ್ಯ. ಅದು ತಾರ್ಕಿಕ. ನಮ್ಮ ಸಂಘಟನೆಯೊಳಗೆ ಶಿಸ್ತು ಇರಬೇಕು' ಎಂದು ಅವರು ಹೇಳಿದರು.
ಈಮಧ್ಯೆ, ಸಿಂಗ್ ಅವರ ಪೋಸ್ಟ್‌ನ ವಿವಾದವು, ಕಾಂಗ್ರೆಸ್ ನಾಯಕರ ಒಂದು ವರ್ಗವು ಆರ್‌ಎಸ್‌ಎಸ್ ಶಿಸ್ತು ಕಲಿಕೆಯ ಅವಕಾಶವನ್ನು ನೀಡುವ ಶಕ್ತಿ ಎಂದು ನಂಬುತ್ತದೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿತು. ಸಿಂಗ್ ಇಂದು ಬೆಳಿಗ್ಗೆ, ನಾನು ನಂಬುವುದಿಲ್ಲ ಎಂದಿದ್ದಾರೆ.
'ಗಾಂಧಿ ಹಂತಕರಿಂದ ಏನನ್ನೂ ಕಲಿಯುವ ಅಗತ್ಯವಿಲ್ಲ. ನಾನು ಕಾಂಗ್ರೆಸ್‌ನಲ್ಲಿದ್ದೆ ಮತ್ತು ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಿದ್ದೇನೆ. ನಾನು ಅವರ (ಆರ್‌ಎಸ್‌ಎಸ್ ಮತ್ತು ಬಿಜೆಪಿ) ಸಿದ್ಧಾಂತವನ್ನು ವಿರೋಧಿಸುತ್ತೇನೆ. ನಾನು ಅವರ ಸಿದ್ಧಾಂತವನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ಆದರೆ, ಪ್ರತಿಯೊಂದು ಸಂಘಟನೆಯನ್ನು ಬಲಪಡಿಸುವ ಅಗತ್ಯವಿದೆ' ಎಂದು ಪ್ರತಿಪಾದಿಸಿದರು.

