

ನವದೆಹಲಿ: ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಂಘಟನಾ ಬಲವನ್ನು ಹೊಗಳಿರುವುದು ಕಾಂಗ್ರೆಸ್ ಕಣ್ಣು ಕೆಂಪಗಾಗುವಂತೆ ಮಾಡಿದ್ದು, ಈ ನಡುವಲ್ಲೇ ದಿಗ್ವಿಜಯ್ ಸಿಂಗ್ ಅವರಿಗೆ ತಿರುವನಂತಪುರಂ ಸಂಸದ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಬೆಂಬಲ ನೀಡಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಮತ್ತು ಆಂತರಿಕ ಸುಧಾರಣೆಗಳ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
140ನೇ ಕಾಂಗ್ರೆಸ್ ಸಂಸ್ಥಾಪನಾ ದಿನದಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿ ತರೂರ್ ಅವರು, ಯಾವುದೇ ರಾಜಕೀಯ ಪಕ್ಷಕ್ಕೆ ಶಿಸ್ತು ಅತ್ಯಗತ್ಯ. ನಮ್ಮ ಪಕ್ಷಕ್ಕೆ 140 ವರ್ಷಗಳ ಇತಿಹಾಸವಿದೆ. ನಾವು ಅದರಿಂದ ಬಹಳಷ್ಟು ಕಲಿಯಬಹುದು ಎಂದು ಹೇಳಿದರು.
ಇದೇ ವೇಳೆ ಪಕ್ಷದಲ್ಲಿ ಆಂತರಿಕ ಸುಧಾರಣೆಗಳ ಅಗತ್ಯವನ್ನು ಒತ್ತಿ ಹೇಳಿದಅವರು, ನಮ್ಮ ಸಂಘಟನೆ ಬಲಗೊಳ್ಳಬೇಕೆಂದು ನಾನು ಬಯಸುತ್ತೇನೆ. ನಮ್ಮ ಸಂಘಟನೆಯಲ್ಲಿ ಶಿಸ್ತು ಇರಬೇಕು. ದಿಗ್ವಿಜಯ್ ಸಿಂಗ್ ಅವರು ತಮ್ಮ ಅಭಿಪ್ರಾಯವನ್ನು ಹೇಳಬಹುದು ಎಂದು ತಿಳಿಸಿದರು.
ದಿಗ್ವಿಜಯ್ ಸಿಂಗ್ ಅವರೊಟ್ಟಿನ ಮಾತುಕತೆ ಕುರಿತ ಪ್ರಶ್ನೆಗೆ ಉತ್ತರಿಸಿ, ನಾವು ಸ್ನೇಹಿತರು. ನಾವಿಬ್ಬರೂ ಮಾತುಕತೆ ನಡೆಸುವುದು ಸಹಜ. ನಮ್ಮ ಪಕ್ಷಧ ಸಂಘಟನೆಯನ್ನುನಾವು ಬಲಪಡಿಸಬೇಕು, ಅದರ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದರು.
ರಾಜ್ಯಸಭಾ ಕಾಂಗ್ರೆಸ್ ಸಂಸದ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ, ಹಂಚಿಕೊಂಡ ಒಂದು ಹಳೆಯ ಫೋಟೋ, ಬಿಜೆಪಿ, ಆರ್‌ಎಸ್‌ಎಸ್ ಮತ್ತು ಕಾಂಗ್ರೆಸ್ ಒಳರಾಜಕೀಯದ ಕುರಿತು ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ದಿಗ್ವಿಜಯ ಸಿಂಗ್ ಅವರು Quora ದಲ್ಲಿ ಪೋಸ್ಟ್ ಮಾಡಿರುವ ಚಿತ್ರದಲ್ಲಿ, ಮೋದಿಯವರು, ಸಾಮಾನ್ಯ ಕಾರ್ಯಕರ್ತನಂತೆ ತಮ್ಮ ನಾಯಕ ಎಲ್.ಕೆ. ಅಡ್ವಾಣಿಯವರ ಬಳಿ ಕೆಳಗೆ ಕುಳಿತಿದ್ದಾರೆ. ಇದನ್ನ ಪೋಸ್ಟ್ ಮಾಡಿರುವ ಸಿಂಗ್, “ಒಬ್ಬ ತಳಮಟ್ಟದ ಆರ್‌ಎಸ್‌ಎಸ್ ಸ್ವಯಂಸೇವಕ ಮತ್ತು ಜನಸಂಘ/ಬಿಜೆಪಿ ಕಾರ್ಯಕರ್ತ ತನ್ನ ನಾಯಕರ ಪಾದಗಳ ಕೆಳಗೆ ಕುಳಿತುಕೊಳ್ಳುವುದರಿಂದ ನಿರಂತರ ಪರಿಶ್ರಮದ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ನಂತರ ದೇಶದ ಪ್ರಧಾನಿಯಾಗುವವರೆಗೆ ಹೇಗೆ ಬೆಳೆಯಬಹುದು ಎಂಬುದನ್ನು ಈ ಫೋಟೋ ಸ್ಪಷ್ಟವಾಗಿ ತೋರಿಸುತ್ತದೆ ಎಂದು ಹೇಳಿದ್ದರು.
ಇದನ್ನು ಸಂಘಟನೆಯ ಶಕ್ತಿಯ ಜೀವಂತ ಉದಾಹರಣೆ ಎಂದು ಬಣ್ಣಿಸಿದ ದಿಗ್ವಿಜಯ್ ಸಿಂಗ್, ಯಾವುದೇ ರಾಜಕೀಯ ಪಕ್ಷದ ನಿಜವಾದ ಶಕ್ತಿ ಅದರ ಕಾರ್ಯಕರ್ತರು ಮತ್ತು ಬಲವಾದ ಸಂಘಟನೆಯಿಂದ ಬರುತ್ತದೆ ಎನ್ನುವುದರೊಂದಿಗೆ "ಜೈ ಸಿಯಾ ರಾಮ್ ಎಂದು ತಿಳಿಸಿದ್ದರು.
ಈ ಫೋಟೋ ಮೂಲಕ ದಿಗ್ವಿಜಯ್ ಸಿಂಗ್ ಅವರು ಪ್ರಧಾನಿ ಮೋದಿ ಅವರ ರಾಜಕೀಯ ಪಯಣವನ್ನು ಉದಾಹರಣೆಯಾಗಿ ತೋರಿಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪರೋಕ್ಷವಾಗಿ ಪಾಠ ಕಲಿಸಿದ್ದಾರೆಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ಬೆಳವಣಿಗೆ ಕಾಂಗ್ರೆಸ್ ಹೈಕಮಾಂಡ್ ಕಣ್ಣು ಕೆಂಪಗಾಗುವಂತೆ ಮಾಡಿದೆ.
ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ದಿಗ್ವಿಜಯ್ ಸಿಂಗ್ ಅವರು, ನಾನು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಡು ವಿರೋಧಿ. ಅಸಲಿಗೆ ನಾನು ಪಕ್ಷದ ಸಂಘಟನೆ ಯನ್ನು ಹೊಗಳಿದ್ದೇನೆಂದು ಹೇಳಿದ್ದಾರೆ.
ನಾನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕಡು ವಿರೋಧಿ. ನನ್ನ ಪೋಸ್ಟ್ ಅನ್ನು ಮಾಧ್ಯಮದವರ ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ. ಅಸಲಿಗೆ ನಾನು ಪಕ್ಷದ ಸಂಘಟನೆ ಬಗ್ಗೆ ಹೊಗಳಿದ್ದೇನೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಗೆ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಸಿಂಗ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
RSSನ್ನೂ ಗಾಂಧಿಜಿ ಹತ್ಯೆಗೈದ ನಾಥೂರಾಮ್ ಗೋಧ್ಸೆ ಜೊತೆ ಹೋಲಿಸಿ, ಆರ್‌ಎಸ್‌ಎಸ್‌ನಿಂದ ಕಲಿಯಲು ಏನೂ ಇಲ್ಲ ಎಂದು ಹೇಳಿದ್ದಾರೆ,
ಇದೇ ವೇಳೆ ಇದೇ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಿರುಕು ಮೂಡಿದೆ ಎಂಬ ಊಹಾಪೋಹಗಳನ್ನು ಕಾಂಗ್ರೆಸ್ ನಾಯಕ ಸಚಿನ್ ಪೈಟಲ್ ಅವರು ನಿರಾಕರಿಸಿದ್ದು, ನಮ್ಮ ಪಕ್ಷ ಒಗ್ಗಟ್ಟಿನಿಂದಿದೆ ಎಂದು ಹೇಳಿದ್ದಾರೆ.
ದಿಗ್ವಿಜಯ್ ಸಿಂಗ್ ಅವರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಒಡಕು ಮೂಡಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದಲೇಇದ್ದೇವೆ. ದೇಶಕ್ಕೆ ಬಲವಾದ ವಿರೋಧ ಪಕ್ಷದ ಅಗತ್ಯವಿದ್ದು, ಪಕ್ಷ ಸಂಘಟನೆಯನ್ನು ಬಲಪಡಿಸುವುದು ನಮ್ಮ ಉದ್ದೇಶವಾಗಿದೆ. ನಮ್ಮ ಪಕ್ಷದಲ್ಲಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ನಮಗಿದೆ ಎಂದು ಹೇಳಿದ್ದಾರೆ.
Advertisement