

ಅಮೃತಸರ: ಭಾರತಕ್ಕೆ ಬಂದಿದ್ದ ಅನಿವಾಸಿ ಭಾರತೀಯ ಪ್ರಜೆಯ ಸೊಂಟದಲ್ಲಿದ್ದ ಗನ್ ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಂಜಾಬ್ ನಲ್ಲಿ ವರದಿಯಾಗಿದೆ.
ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ಸೋಮವಾರ ಸೋಫಾದಿಂದ ಎದ್ದೇಳುತ್ತಿದ್ದಾಗ ಸೊಂಟದಲ್ಲಿದ್ದ ಗನ್ ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಹರ್ಪಿಂದರ್ ಸಿಂಗ್ ಅಲಿಯಾಸ್ ಸೋನು ಎಂಬಾತ ಸಾವನ್ನಪ್ಪಿದ್ದಾರೆ.
ಹರ್ಪಿಂದರ್ ಸಿಂಗ್ ಅಲಿಯಾಸ್ ಸೋನು ಧನಿ ಸುಚಾ ಸಿಂಗ್ ಗ್ರಾಮದಲ್ಲಿ ನೆಲೆಸಿದ್ದ ಅನಿವಾಸಿ ಭಾರತೀಯರಾಗಿದ್ದು, ಇತ್ತೀಚೆಗೆ ಸ್ವಗ್ರಾಮಕ್ಕೆ ಆಗಮಿಸಿದ್ದರು. ವಿದೇಶದಿಂದ ಹಿಂದಿರುಗಿ ವಿವಾಹವಾದ ಹರ್ಪಿಂದರ್ ಸಿಂಗ್ ಗೆ 2 ವರ್ಷದ ಮಗಳಿದ್ದಾಳೆ.
ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ನಡೆಸಲಾಯಿತು. ಅವರ ಗ್ರಾಮದ ಅನೇಕ ಜನರು ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಗೌರವ ಸಲ್ಲಿಸಲು ಹಾಜರಿದ್ದರು.
ಆಗಿದ್ದೇನು?
ಘಟನೆ ನಡೆದಾಗ ಹರ್ಪಿಂದರ್ ಸಂಬಂಧಿಕರೊಬ್ಬರೊಂದಿಗೆ ಸೋಫಾದಲ್ಲಿ ಕುಳಿತಿದ್ದರು. ಅವರು ಎದ್ದು ನಿಂತಾಗ ಅವರ ಸೊಂಟದಲ್ಲಿದ್ದ ಪಿಸ್ತೂಲ್ ನಿಂದ ಗುಂಡು ಸಿಡಿದಿದೆ. ಈ ವೇಳೆ ಅವರ ಹೊಟ್ಟೆಗೆ ಗುಂಡು ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಮನೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಕೂಡಲೇ ಹರ್ಪಿಂದರ್ ರನ್ನು ಕುಟುಂಬಸ್ಥರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಈ ವೇಳೆ ಬಟಿಂಡಾಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಹರ್ಪಿಂದರ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಸದರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ರವೀಂದರ್ ಶರ್ಮಾ ಅವರು ಹರ್ಪಿಂದರ್ ಅವರ ತಂದೆ ದರ್ಶನ್ ಸಿಂಗ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡರು ಮತ್ತು ಬಿಎನ್ಎಸ್ (ಭಾರತೀಯ ನ್ಯಾಯ ಸಂಹಿತಾ) ಸೆಕ್ಷನ್ 194 ರ ಅಡಿಯಲ್ಲಿ ಕ್ರಮ ಕೈಗೊಂಡ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.
Advertisement