ದೆಹಲಿ ಚುನಾವಣೆ: ಎಎಪಿ ಗೆಲುವಿನ ಸುಳಿವು ಅಮಿತ್ ಶಾರನ್ನು ತಬ್ಬಿಬ್ಬುಗೊಳಿಸಿದೆ!

ದೆಹಲಿ ವಿಧಾನಸಭಾ ಚುನಾವಣೆ ಫೆಬ್ರುವರಿ 5 ರಂದು ನಡೆಯಲಿದ್ದು, ಫೆಬ್ರುವರಿ 8 ರಂದು ಫಲಿತಾಂಶ ಹೊರಬೀಳಲಿದೆ.
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Updated on

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಿಜೆಪಿ ಗೂಂಡಾಗಿರಿ ನಡೆಸುತ್ತಿದೆ ಎಂದು ಆರೋಪಿಸಿ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಭಾನುವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಫೆಬ್ರುವರಿ 5ರ ಚುನಾವಣೆಯಲ್ಲಿ ಎಎಪಿ 'ನಿರ್ಣಾಯಕ ಗೆಲುವು' ಗೆಲುವು ಸಾಧಿಸಲಿದೆ. ಇದು ಬಿಜೆಪಿ ನಾಯಕರನ್ನು, ವಿಶೇಷವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು 'ತಬ್ಬಿಬ್ಬುಗೊಳಿಸಿದೆ ಮತ್ತು ಹತಾಶರನ್ನಾಗಿ' ಮಾಡಿದೆ ಎಂದು ಹೇಳಿದ್ದಾರೆ.

'ಎಎಪಿ ಚುನಾವಣೆಯಲ್ಲೆ ಗೆಲ್ಲುವ ಸುಳಿವು ಸಿಕ್ಕಿದೆ ಮತ್ತು ಇದರಿಂದ ಅಮಿತ್ ಶಾ ಕಂಗೆಟ್ಟಿದ್ದಾರೆ. ಹೀಗಾಗಿ, ಬಿಜೆಪಿಯು ಗೂಂಡಾಗಿರಿಯನ್ನು ಆಶ್ರಯಿಸಿದೆ. ಬಿಜೆಪಿ ಕಾರ್ಯಕರ್ತರು ಎಎಪಿಯ ಸ್ವಯಂಸೇವಕರು ಮತ್ತು ಬೆಂಬಲಿಗರಿಗೆ ಬೆದರಿಕೆ ಮತ್ತು ಹಲ್ಲೆ ನಡೆಸುತ್ತಿದ್ದಾರೆ' ಎಂದು ಆರೋಪಿಸಿದರು.

ನಮ್ಮ ಪಕ್ಷದ ನಾಯಕರು ಮತ್ತು ಬೆಂಬಲಿಗರಿಗೆ ಬಿಜೆಪಿ ಸೇರುವಂತೆ ಬೆದರಿಕೆ ಹಾಕಲಾಗುತ್ತಿದೆ. ಇಲ್ಲದಿದ್ದರೆ ಬಂಧನ ಮತ್ತು ದಾಳಿಗಳನ್ನು ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ನಾವು ಇದಕ್ಕೆಲ್ಲಾ ಹೆದರುವುದಿಲ್ಲ. ಇಂತಹ 'ಬೆದರಿಕೆ ತಂತ್ರಗಳನ್ನು' ದೆಹಲಿ ಸಹಿಸುವುದಿಲ್ಲ ಎಂದರು.

ಆಪಾದಿತ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ, ಕೇಜ್ರಿವಾಲ್ X ನಲ್ಲಿ 'AmitShahKiGoondagardi' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹೊಸ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಈ ಹ್ಯಾಶ್‌ಟ್ಯಾಗ್ ಬಳಸಿ ಬಿಜೆಪಿಯಿಂದಾಗುವ 'ದಾಳಿ ಅಥವಾ ಬೆದರಿಕೆಗಳ' ಘಟನೆಗಳನ್ನು ಹಂಚಿಕೊಳ್ಳಲು ಜನರನ್ನು ಒತ್ತಾಯಿಸಿದರು.

'ಬಿಜೆಪಿಗೆ ದೆಹಲಿ ಬಗ್ಗೆ ಯಾವುದೇ ದೂರದೃಷ್ಟಿ ಇಲ್ಲ, ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ಅಭಿವೃದ್ಧಿ ಅಜೆಂಡಾ ಇಲ್ಲ. ಅವರಲ್ಲಿರುವುದು ಕೇವಲ ಗೂಂಡಾಗಿರಿ. ಅವರು ಭಯದಿಂದ ಗೆಲ್ಲಲು ಬಯಸುತ್ತಾರೆ ಹೊರತು ಮತಗಳಿಂದ ಅಲ್ಲ. ನಗರದ ಸುರಕ್ಷತೆ ಮತ್ತು ಪ್ರಜಾಪ್ರಭುತ್ವದ ಸಮಗ್ರತೆಗಾಗಿ ಬಿಜೆಪಿ ವಿರುದ್ಧ ದೆಹಲಿಯ ಜನರು ಒಂದಾಗಬೇಕು ಎಂದು ಕರೆ ನೀಡಿದರು.

ದೆಹಲಿ ವಿಧಾನಸಭಾ ಚುನಾವಣೆ ಫೆಬ್ರುವರಿ 5 ರಂದು ನಡೆಯಲಿದ್ದು, ಫೆಬ್ರುವರಿ 8 ರಂದು ಫಲಿತಾಂಶ ಹೊರಬೀಳಲಿದೆ.

ಎಎಪಿ ಸತತ ಮೂರನೇ ಅವಧಿಗೆ ದೆಹಲಿ ಗದ್ದುಗೆ ಏರಲು ಯತ್ನಿಸುತ್ತಿದ್ದು, 25 ವರ್ಷಗಳ ನಂತರ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರವನ್ನು ಮರಳಿ ಪಡೆಯಲು ಬಿಜೆಪಿ ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com