
ಮುಂಬೈ: ಶಿವಸೇನೆ (ಯುಬಿಟಿ) ಪ್ರಮುಖ ನಾಯಕ ಸಂಜಯ್ ರಾವುತ್ ಅವರು ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದು, ದೆಹಲಿ ನಾಯಕರೊಬ್ಬರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮಹಾರಾಷ್ಟ್ರದ ಸಚಿವ ಮತ್ತು ಬಿಜೆಪಿ ಶಾಸಕ ನಿತೇಶ್ ರಾಣೆ ಅವರು ಭಾನುವಾರ ಹೇಳಿದ್ದಾರೆ.
ರಾವುತ್ ಅವರ ರಾಜ್ಯಸಭಾ ಅವಧಿಯು ಅಂತ್ಯಗೊಳ್ಳುತ್ತಿದೆ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು ಮತ್ತೊಂದು ಅವಧಿಗೆ ಅವರ ಗೆಲುವನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಶಾಸಕರನ್ನು ಹೊಂದಿಲ್ಲ ಎಂದು ಹೇಳಿದರು.
2024ರ ನವೆಂಬರ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ (ಯುಬಿಟಿ) 20 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿದೆ.
ರಾವುತ್ ಅವರು ಶಿವಸೇನೆಯಲ್ಲಿ (ಯುಬಿಟಿ) ಎಷ್ಟು ದಿನ ಇರಲಿದ್ದಾರೆ ಎಂಬುದರ ಕುರಿತು ಸಾಮ್ನಾದಲ್ಲಿ (ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ಮೌತ್‌ಪೀಸ್) ಬರೆಯಬೇಕು. ಕಾಂಗ್ರೆಸ್ ಸೇರಲು ದೆಹಲಿಯಲ್ಲಿ ಮಾತುಕತೆ ನಡೆಸುತ್ತಿರುವ ನಾಯಕರು ಯಾರು ಎಂಬ ಬಗ್ಗೆ ಬರೆಯಬೇಕು. ಈ ವಿಷಯದ ಬಗ್ಗೆಯೂ ಹೇಳಿಕೆ ನೀಡಬೇಕು' ಎಂದು ರಾಣೆ ಸುದ್ದಿಗಾರರಿಗೆ ತಿಳಿಸಿದರು.
ಪುನರಾವರ್ತಿತ ಪ್ರಯತ್ನಗಳ ಹೊರತಾಗಿಯೂ ಈ ಕುರಿತು ಪ್ರತಿಕ್ರಿಯೆ ಪಡೆಯಲು ಸಂಜಯ್ ರಾವುತ್ ಅವರನ್ನು ಸಂಪರ್ಕಿಸಲು ಆಗಲಿಲಿಲ್ಲ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪ ಮುಖ್ಯಮಂತ್ರಿ ಹಾಗೂ ಶಿವಸೇನೆ ನಾಯಕ ಏಕನಾಥ್ ಶಿಂಧೆ ನಡುವಿನ ಭಿನ್ನಾಭಿಪ್ರಾಯವು ರಾಜ್ಯದಲ್ಲಿ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ ಎಂದು ರಾವುತ್ ಪ್ರತಿಪಾದಿಸಿರುವ ಹಿನ್ನೆಲೆಯಲ್ಲಿ ರಾಣೆ ಅವರ ಈ ಹೇಳಿಕೆಗಳು ಬಂದಿವೆ.
ಭಾನುವಾರ ಶಿವಸೇನಾ (ಯುಬಿಟಿ) ಮುಖವಾಣಿ 'ಸಾಮ್ನಾ'ದಲ್ಲಿ ತಮ್ಮ ಸಾಪ್ತಾಹಿಕ ಅಂಕಣ ರೋಖ್‌ಥೋಕ್‌ನಲ್ಲಿ, ಫಡ್ನವಿಸ್ ಮತ್ತು ಶಿಂಧೆ ನಡುವಿನ 'ಹಳಸಿದ ಸಂಬಂಧ' ರಾಜ್ಯದ ಪ್ರಗತಿಗೆ ಅಡ್ಡಿಯಾಗುತ್ತಿದೆ ಎಂದು ರಾವುತ್ ಹೇಳಿದ್ದಾರೆ.
ನವೆಂಬರ್ 2024ರ ವಿಧಾನಸಭಾ ಚುನಾವಣೆಯ ನಂತರ ಶಿಂಧೆ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿಲ್ಲ. ಹೀಗಾಗಿ, ಮುಖ್ಯಮಂತ್ರಿ ಹುದ್ದೆಯನ್ನು ಮರಳಿ ಪಡೆಯಲು ಹತಾಶವಾಗಿ ಪ್ರಯತ್ನಿಸುತ್ತಿದ್ದಾರೆ. ತಮಗೆ ನೀಡುವುದಿಲ್ಲ ಎಂಬ ಅಂಶವನ್ನು ಶಿಂಧೆ ಅವರು ಇನ್ನೂ ಒಪ್ಪಿಕೊಂಡಿಲ್ಲ. ಆದರೆ, ಇದನ್ನು ಫಡ್ನವಿಸ್ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ರಾವುತ್ ಹೇಳಿದ್ದಾರೆ.
ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ಮಿತ್ರಪಕ್ಷಗಳಾಗಿವೆ.
Advertisement