
ಕೊಯಮತ್ತೂರು: ತನ್ನ ದುಬಾರಿ ಬೈಕ್ ನಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಜರ್ಮನಿ ಮೂಲದ ಪ್ರವಾಸಿಗನ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿರುವ ಭೀಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ತಮಿಳುನಾಡಿನ ಕೊಯಮತ್ತೂರಿನ ವಾಲ್ಪಾರೈ ಬಳಿಯ ಘಾಟಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸುಮಾರು 77 ವರ್ಷ ವಯಸ್ಸಿನ ಜರ್ಮನ್ ಪ್ರವಾಸಿಗನ ಮೇಲೆ ಒಂಟಿ ಸಲಗ ದಾಳಿ ಮಾಡಿದೆ. ಕಾಡಾನೆ ದಾಳಿಯಿಂದಾಗಿ ಜರ್ಮನ್ ಪ್ರವಾಸಿಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬೈಕ್‌ನಲ್ಲಿ ತೆರಳುತ್ತಿದ್ದ ಜರ್ಮನ್ ಪ್ರವಾಸಿಗ ಆನೆಯನ್ನು ನೋಡಿದರೂ ಆನೆ ರಸ್ತೆ ಪಕ್ಕಕ್ಕಿದೆ. ಮತ್ತೊಂದು ಬದಿಯಲ್ಲಿ ತಾನು ಹೋಗಬಹುದು ಎಂದು ಭಾವಿಸಿ ವೇಗವಾಗಿ ಬೈಕ್ ನುಗ್ಗಿಸಿದ್ದಾನೆ. ಈ ವೇಳೆ ಬೈಕ್ ನ ಶಬ್ಧ ಕೇಳಿ ತಿರುಗಿದ ಕಾಡಾನೆ ಏಕಾಏಕಿ ಪ್ರವಾಸಿಗನ ಬೈಕ್ ನತ್ತ ನುಗ್ಗಿ ದಾಳಿ ಮಾಡಿದೆ.
ಮೊದಲು ಆತನನ್ನು ತಳ್ಳಿದ ಆನೆ ಬಳಿಕ ಹಿಂದೆ ಬಂದಿತ್ತು. ಆದರೆ ಆತ ಯಾವಾಗ ಮತ್ತೆ ಎದ್ದು ಬರಲು ಪ್ರಯತ್ನಿಸಿದನೋ ಆಗ ಮತ್ತೆ ಆತನ ಮೇಲೆ ದಾಳಿ ಮಾಡಿದೆ. ಈ ವೇಳೆ ಆತ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಬೈಕ್‌ನ ಹಿಂದೆ ಬರುತ್ತಿದ್ದವರು ವಿಡಿಯೊ ಚಿತ್ರೀಕರಿಸಿದ್ದು, ಜರ್ಮನ್ ಪ್ರವಾಸಿಗ ಬೈಕ್ ಬಿಟ್ಟು ಕಾಡಿನೊಳಗೆ ಓಡಿಹೋದರೂ ಬಿಡದೆ ಆನೆ ದಾಳಿ ನಡೆಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಈ ಘಟನೆ ಸಂಭವಿಸಿದ್ದು, ಮೃತ ವ್ಯಕ್ತಿಯನ್ನು 77 ವರ್ಷದ ಜರ್ಮನ್ ಪ್ರಜೆ ಮೈಕೆಲ್ ಎಂದು ಗುರುತಿಸಲಾಗಿದೆ. ಆನೆ ದಾಳಿ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Advertisement