
ಆಗ್ರಾ: ತನ್ನ ಗಂಡ ಹೈ ಹೀಲ್ಸ್ ಚಪ್ಪಲಿ ಕೊಡಿಸಲಿಲ್ಲ ಎಂಬ ಕಾರಣಕ್ಕೇ ಮಹಿಳೆಯೊಬ್ಬರು ಆತನ ವಿರುದ್ಧ ದೂರು ನೀಡಿದ್ದು ಮಾತ್ರವಲ್ಲದೇ ವಿಚ್ಛೇದನಕ್ಕಾಗಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಹೌದು.. ಗಂಡ-ಹೆಂಡತಿ ಕ್ಷುಲ್ಲಕ ವಿಚಾರಕ್ಕೆ ಬೇರ್ಪಡುತ್ತಿರುವ ಸುದ್ದಿಗಳು ನಿತ್ಯ ಕೇಳುತ್ತಲೇ ಇರುತ್ತೇವೆ. ಅಂತಹುದೇ ಒಂದು ಘಟನೆ ಇದೀಗ ಉತ್ತರ ಪ್ರದೇಶದಲ್ಲೂ ವರದಿಯಾಗಿದ್ದು, ಈ ಪ್ರಕರಣದಲ್ಲಿ ಪತ್ನಿ ತನ್ನ ಗಂಡ ಹೈ ಹೀಲ್ಸ್ ಚಪ್ಪಲಿ ಕೊಡಿಸಲಿಲ್ಲ ಎಂಬ ಕಾರಣಕ್ಕೇ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕೋರ್ಟ್ ನಲ್ಲಿ ವಿಚ್ಚೇದನಕ್ಕೂ ಅರ್ಜಿ ಸಲ್ಲಿಸಿದ್ದಾರೆ.
ಹೈ ಹೀಲ್ಸ್ ಕೊಳ್ಳುವ ವಿಚಾರವಾಗಿ ನಡೆದ ದಂಪತಿಗಳ ಜಗಳ ಇದೀಗ ವಿಚ್ಛೇದನ ಹಂತಕ್ಕೆ ತಲುಪಿದ್ದು, ಮಾತ್ರವಲ್ಲದೇ ಈ ವಿಚಾರ ಇದೀಗ ಇಬ್ಬರ ನಡುವೆ ವಿಚ್ಛೇದನ ಅರ್ಜಿ ಸಲ್ಲಿಸುವವರೆಗೂ ಮುಂದುವರೆದಿದೆ.
ವರದಿಗಳ ಪ್ರಕಾರ, ಆಗ್ರಾದ ಈ ದಂಪತಿಗಳು 2024 ರಲ್ಲಿ ವಿವಾಹವಾಗಿದ್ದರು. ಮದುವೆಯ ನಂತರ, ಶಾಪಿಂಗ್ ಹೋಗಿದ್ದ ಪತ್ನಿ ತನ್ನ ಪತಿಗೆ ಕೆಲ ಹೈ ಹೀಲ್ಡ್ ಸ್ಯಾಂಡಲ್ (ಚಪ್ಪಲಿ)ಗಳನ್ನು ಖರೀದಿಸುವಂತೆ ಕೇಳಿದ್ದಾರೆ. ಈ ವೇಳೆ ಆಕೆಯ ಗಂಡ ತನ್ನ ಪತ್ನಿಯ ಕೋರಿಕೆಯಂತೆ ಹೈ ಹೀಲ್ಸ್ ಚಪ್ಪಲಿಗಳನ್ನು ಕೊಡಿಸಿದ್ದಾನೆ. ಈ ಚಪ್ಪಲಿಗಳನ್ನು ಧರಿಸಿ ನಡೆಯುವಾಗ ಆಕೆ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದಳು. ಆ ಸಂದರ್ಭದಲ್ಲಿ ಕೋಪಗೊಂಡ ಗಂಡ ಇನ್ನು ಮುಂದೆ ಹೈ ಹೀಲ್ಸ್ ಚಪ್ಪಲಿಗಳನ್ನು ಧರಿಸಬೇಡ ಎಂದು ಕಿವಿಮಾತು ಹೇಳಿದ್ದಾನೆ.
ಇದಕ್ಕೆ ಒಪ್ಪದ ಪತ್ನಿ ಕೆಲ ದಿನಗಳ ಬಳಿಕ ಮತ್ತೆ ತನಗೆ ಹೈ ಹೀಲ್ಸ್ ಚಪ್ಪಲಿ ಬೇಕು ಎಂದು ಕೇಳಿದಾಗ ಪತಿರಾಯ ಅದನ್ನು ಕೊಡಿಸಲು ನಿರಾಕರಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಕ್ಸಮರ ಏರ್ಪಟ್ಟಿದ್ದು, ಗಂಡ-ಹೆಂಡತಿ ಪರಸ್ಪರ ನಿಂದಿಸಿಕೊಂಡಿದ್ದಾರೆ. ಕಳೆದ ತಿಂಗಳು ದಂಪತಿಗಳ ಕಲಹ ವಿಕೋಪಕ್ಕೆ ಹೋಗಿ ಹೆಂಡತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಇಬ್ಬರನ್ನು ಸಮಾಧಾನ ಮಾಡಿ ಮನೆಗೆ ವಾಪಸ್ ಕಳುಹಿಸಿದ್ದು, ಈ ವೇಳೆ ಪತ್ನಿ ಕೋಪದಿಂದ ತನ್ನ ಹೆತ್ತವರ ಮನೆಗೆ ಮರಳಿದ್ದಾರೆ. ಸುಮಾರು ಒಂದು ತಿಂಗಳು ಪತ್ನಿ ತನ್ನ ತವರು ಮನೆಯಲ್ಲೇ ಇದ್ದು, ಈ ವೇಳೆ ತನಗೆ ವಿಚ್ಚೇದನ ಬೇಕು ಎಂದು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಪತಿ-ಪತ್ನಿಯ ಪ್ರಕರಣ ಆಲಿಸಿದ ಆಗ್ರಾ ಕೋರ್ಟ್ ಇದನ್ನು ಆಗ್ರಾ ಕುಟುಂಬ ಸಲಹಾ ಕೇಂದ್ರಕ್ಕೆ ರವಾನೆ ಮಾಡಿದೆ. ಆಗ್ರಾ ಕುಟುಂಬ ಸಲಹಾ ಕೇಂದ್ರದ ಸಲಹೆಗಾರರಾದ ಡಾ. ಸತ್ಯೇಶ್ ಖಿರ್ವಾರ್ ಪ್ರಕಾರ, ಕೌನ್ಸೆಲಿಂಗ್ ನಂತರ ದಂಪತಿಗಳು ಮನವರಿಕೆ ಮಾಡಿಕೊಂಡಿದ್ದು, ರಾಜಿ ಮಾಡಿಕೊಂಡು ಒಂದಾಗಿದ್ದಾರೆ ಎಂದು ಹೇಳಿದ್ದಾರೆ.
Advertisement