
2025ರ ಪ್ರಯಾಗರಾಜ್ ಮಹಾಕುಂಭದಲ್ಲಿ ಇಲ್ಲಿಯವರೆಗೆ 42 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. 26ನೇ ದಿನವಾದ ಇಂದು ಫೆಬ್ರವರಿ 7ರಂದು ಬೆಳಿಗ್ಗೆ 10 ಗಂಟೆಯವರೆಗೆ, 42 ಕೋಟಿಗೂ ಹೆಚ್ಚು ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಜನವರಿ 13ರಿಂದ ಇಲ್ಲಿಯವರೆಗೆ ಸಂಗಮದಲ್ಲಿ ಸ್ನಾನ ಮಾಡುವವರ ಸಂಖ್ಯೆ 42 ಕೋಟಿ ದಾಟಿದೆ. ಮಹಾ ಕುಂಭಮೇಳಕ್ಕೆ ಇನ್ನೂ 19 ದಿನಗಳು ಬಾಕಿ ಇವೆ. ಸಂಗಮದಲ್ಲಿ ಕನಿಷ್ಠ 10 ಕೋಟಿ ಭಕ್ತರು ಸ್ನಾನ ಮಾಡುವ ನಿರೀಕ್ಷೆಯಿದೆ. ಇಂತಹ ಪರಿಸ್ಥಿತಿಯಲ್ಲಿ, ಒಟ್ಟು ಭಕ್ತರ ಸಂಖ್ಯೆ 50 ಕೋಟಿ ದಾಟುವ ನಿರೀಕ್ಷೆಯಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಫೆಬ್ರವರಿ 10ರಂದು ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲಿದ್ದಾರೆ. ಮತ್ತೊಂದೆಡೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, "ನಮಗೆ ಪವಿತ್ರ ಸ್ನಾನ ಮಾಡುವ ಅವಕಾಶ ಸಿಕ್ಕಿತು. ಇದು ನನ್ನ ಅದೃಷ್ಟದ ವಿಷಯ. ಭಾರತದ ನಂಬಿಕೆಯ ಕೇಂದ್ರವಾಗಿರುವ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ನಂತರ ಪ್ರತಿಯೊಬ್ಬ ವ್ಯಕ್ತಿಯು ತಾನು ಅದೃಷ್ಟಶಾಲಿ ಎಂದು ಪರಿಗಣಿಸುತ್ತಾನೆ ಎಂದು ಹೇಳಿದರು. ಅವರೊಂದಿಗೆ, ಕೈಗಾರಿಕಾ ಅಭಿವೃದ್ಧಿ ಸಚಿವ ನಂದ ಗೋಪಾಲ್ ಗುಪ್ತಾ ನಂದಿ ಕೂಡ ಪವಿತ್ರ ಸ್ನಾನ ಮಾಡಿದರು.
ಜಾರ್ಖಂಡ್ ಮಾಜಿ ಸಿಎಂ ರಘುಬರ್ ದಾಸ್, ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಇಂದು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ಥಾನ ಮಾಡಿದರು. ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ, ಸಂಸದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ಇತರ ಕೆಲವು ಸಚಿವರೊಂದಿಗೆ ಪ್ರಯಾಗ್‌ರಾಜ್ ತಲುಪಲಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ ಇಲ್ಲಿಯವರೆಗೆ ಸುಮಾರು 42 ಲಕ್ಷ ಜನರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ ಮಾಹಿತಿ ಬಿಡುಗಡೆ ಮಾಡಿದೆ.
ಕುಂಭಮೇಳದ 26ನೇ ದಿನವಾದ ಇಂದು ಮಹಾಕುಂಭ ನಗರದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ದಳದ ತಂಡವು ಘಟನಾ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು. ಅಗ್ನಿ ಅವಘಡದಲ್ಲಿ ಕೆಲ ಟೆಂಟ್ ಗಳು ಅಗ್ನಿಗಾವುತಿಯಾಗಿವೆ. ಮೊದಲಿಗೆ ಉತ್ತರ ಪ್ರದೇಶ ಸರ್ಕಾರ ಮಹಾಕುಂಭ ಮೇಳದಲ್ಲಿ ಬರೋಬ್ಬರಿ 40 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಹೊಂದಿತ್ತು. ಈ ನಿರೀಕ್ಷೆಯನ್ನು ಮೀರಿದ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ.
ಮೌನಿ ಅಮಾವಾಸ್ಯೆಯಂದು ಅಂದರೆ ಜನವರಿ 29ರಂದು ಅತಿ ಹೆಚ್ಚು 8 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಇದು ಜಗತ್ತಿನಲ್ಲೇ ಅತೀ ಹೆಚ್ಚು ಜನ ಸೇರಿದ ದಾಖಲೆಯನ್ನೂ ಬರೆದಿದೆ. ಮಕರ ಸಂಕ್ರಾಂತಿಯಂದು 3.5 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದರು. ಜನವರಿ 30 ಮತ್ತು ಫೆಬ್ರವರಿ 1 ರಂದು 2 ಕೋಟಿಗೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದರು. ಪೌಷ ಪೂರ್ಣಿಮೆಯಂದು 1.7 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದರು. ಇದಲ್ಲದೆ, ವಸಂತ ಪಂಚಮಿಯಿಂದ ಇಲ್ಲಿಯವರೆಗೂ 2.5 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿಯಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
Advertisement