
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತಗಳಿಸಿ ಸರ್ಕಾರ ರಚನೆಯಾಗುವುದು ಖಚಿತವಾಗಿದೆ.
ದೆಹಲಿಯಲ್ಲಿ ಕೇಜ್ರಿವಾಲ್ ನೇತೃತ್ವದ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ದೆಹಲಿ ಅಬಕಾರಿ ನೀತಿ ಹಗರಣ ( liquorgate scam ) ಮೊದಲಾದ ಆರೋಪಗಳನ್ನು ಹೊರಿಸಿದ್ದ ಬಿಜೆಪಿ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಿ ಸಿಎಂ ಪದವಿಯಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿತ್ತು. ಈಗ ಆಮ್ ಆದ್ಮಿ ಪಕ್ಷವನ್ನು ಅಧಿಕಾರದಿಂದ ದೂರವಿಡುವುದರಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಆಮ್ ಆದ್ಮಿ ಪಕ್ಷದ ವಿರುದ್ಧ ಮಾಡಿದ್ದ ಆರೋಪಗಳನ್ನು ಸಾಬೀತುಪಡಿಸುವ ಅನಿವಾರ್ಯತೆ ಎದುರಾಗಿದೆ.
ಬಿಜೆಪಿ ಸರ್ಕಾರ ರಚನೆ ಮಾಡುತ್ತಿದ್ದಂತೆಯೇ ಆಮ್ ಆದ್ಮಿ ಪಕ್ಷ, ಕೇಜ್ರಿವಾಲ್ ಅವಧಿಯ ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (SIT) ರಚನೆ ಮಾಡುವುದನ್ನು ಆದ್ಯತೆಯನ್ನಾಗಿ ಪರಿಗಣಿಸಲಿದೆ ಎಂದು ಬಿಜೆಪಿ ನಾಯಕ ಪರ್ವೇಶ್ ವರ್ಮಾ ಹೇಳಿದ್ದಾರೆ.
ಬಿಜೆಪಿ ಸರ್ಕಾರ ಎಸ್ಐಟಿ ರಚನೆ ಮಾಡಿದಲ್ಲಿ ಅದು ಭವಿಷ್ಯದಲ್ಲಿ ಕೇಜ್ರಿವಾಲ್ ಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೇಜ್ರಿವಾಲ್ ವಿರುದ್ಧ 4000 ಮತಗಳ ಅಂತರದಿಂದ ಭರ್ಜರಿ ಗೆಲುವು ಪಡೆದ ಬಳಿಕ ಎಎನ್ಐ ನೊಂದಿಗೆ ಮಾತನಾಡಿರುವ ವರ್ಮಾ, ದೆಹಲಿಯ ಮುಂದಿನ ಸಿಎಂ ಯಾರಾಗಬೇಕೆಂಬುದರ ಬಗ್ಗೆ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಧಾರ ಮಾಡಲಿದೆ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಜನತೆ ನಂಬಿಕೆ ಇಟ್ಟಿದ್ದು, ದೆಹಲಿಯಲ್ಲಿ ಬಿಜೆಪಿಗೆ ಅಧಿಕಾರ ನೀಡಿದ್ದಾರೆ ಎಂದು ವರ್ಮಾ ಹೇಳಿದ್ದಾರೆ.
Advertisement