
ವಿಜಯಪುರ: ಉಚಿತ ಯೋಜನೆ, ಸುಳ್ಳು ಆಶ್ವಾಸನೆಗಳ ಮೂಲಕ ಅರವಿಂದ್ ಕೇಜ್ರಿವಾಲ್ ಚುನಾವಣಾ ವ್ಯವಸ್ಥೆ ಬುಡಮೇಲು ಮಾಡಿದ್ದ ದ್ರೋಹಿ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ ಸೋಲಿನ ರುಚಿ ಕಂಡಿದ್ದು, ಬರೊಬ್ಬರಿ 26 ವರ್ಷಗಳ ಬಳಿಕ ಬಿಜೆಪಿ ದೆಹಲಿ ಆಡಳಿತ ಚುಕ್ಕಾಣಿ ಹಿಡಿಯುತ್ತಿದೆ. ದೆಹಲಿ ಚುನಾವಣಾ ಫಲಿತಾಂಶದ ಕುರಿತು ವಿಜಯಪುರದಲ್ಲಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ, 'ಉಚಿತ ಯೋಜನೆ, ಸುಳ್ಳು ಆಶ್ವಾಸನೆಗಳ ಮೂಲಕ ಬಡ ಜನರ ವೋಟು ಕದ್ದು, ಚುನಾವಣೆ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದ ದ್ರೋಹಿ ಅರವಿಂದ ಕೇಜ್ರಿವಾಲ್ ಗೆ ದೆಹಲಿ ಮತದಾರರು ತಕ್ಕಶಾಸ್ತಿ ಮಾಡಿದ್ದಾರೆ. ಹೀನಾಯ ಸೋಲು ಉಣಿಸಿದ್ದಾರೆ ಎಂದು ಹೇಳಿದರು.
ಅಂತೆಯೇ '10 ವರ್ಷಗಳ ಕಾಲ ಕೇಜ್ರಿವಾಲ್ ಅವರು ದೆಹಲಿಯಲ್ಲಿ ದುರಾಡಳಿತ ನಡೆಸಿದ್ದರು. ಜೈಲಿಗೆ ಹೋದರೂ ಲಜ್ಜೆಗೆಟ್ಟು ಆಡಳಿತ ನಡೆಸಿದ್ದ ಸಂವಿಧಾನ ದ್ರೋಹಿ. ದೆಹಲಿ ಎಂಬುದು ಒಂದು ಬೃಹತ್ ಮಹಾನಗರ ಪಾಲಿಕೆ ಆಡಳಿತ ಇದ್ದಂತೆ. ಬೇರೆ ರಾಜ್ಯಗಳಿಗೆ ಇರುವಂತೆ ಹೆಚ್ಚಿನ ಜವಾಬ್ದಾರಿ ಇಲ್ಲದ ಸರ್ಕಾರವಾಗಿದೆ. ಅತೀ ಹೆಚ್ಚು ಆದಾಯ ಸಂಗ್ರಹವಾಗುವ ದೆಹಲಿಯಲ್ಲಿ ಸರ್ಕಾರದ ಖಜಾನೆಯನ್ನು ಲೂಟಿ ಹೊಡೆದ ದೇಶ ಕಂಡ ಹೀನಮನಸ್ಸಿನ ರಾಜಕಾರಣಿಯಾಗಿದ್ದರು. ದೇಶಕ್ಕೆ ಕೆಟ್ಟ ಚುನಾವಣಾ ಮಾದರಿಯನ್ನು ಹಾಕಿ, ಉಚಿತ ಯೋಜನೆಗಳ ಮೂಲಕ ದೆಹಲಿ, ಪಂಜಾಬ್ ಗೆಲುವು ಸಾಧಿಸಿದ್ದರು ಎಂದು ಕಾರಜೋಳ ಕಿಡಿಕಾರಿದರು.
ಇದೇ ವೇಳೆ, 'ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಆಡಳಿತದಿಂದಾಗಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದೆ. ದೆಹಲಿ ಗೆಲುವಿಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ' ಎಂದರು. ಅಂತೆಯೇ ಕಾಂಗ್ರೆಸ್ ವಿರುದ್ಧವೂ ಕಿಡಿಕಾರಿದ ಕಾರಜೋಳ, 'ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಹೀನಾಯವಾಗಿ ಸೋಲು ಕಂಡಿದೆ. ಎಲ್ಲಿಯ ವರೆಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಸರ್ವಾಧಿಕಾರದಲ್ಲಿ ಕಾಂಗ್ರೆಸ್ ಇರುತ್ತದೆಯೋ ಅಲ್ಲಿಯ ವರೆಗೆ ಪಕ್ಷ ನಶಿಸಿ ಹೋಗಲಿದೆ ಎಂದರು.
Advertisement