
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾ ರೂಢ ಎಎಪಿ ಪಕ್ಷ ತೀವ್ರ ಮುಖಭಂಗಕ್ಕೀಡಾಗಿದ್ದು, ಅದರ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನವಾಗಿದೆ. ಈ ಕುರಿತು ಇದೇ ಮೊದಲ ಬಾರಿಗೆ ಎಎಪಿ ಮುಖ್ಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಾತನಾಡಿದ್ದು, ಜನರ ಆದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಪಕ್ಷ ಸೋಲಿನತ್ತ ಮುಖ ಮಾಡಿದ್ದು, ಬಿಜೆಪಿ ಭಾರಿ ಅಂತರದ ಗೆಲುವಿನತ್ತ ದಾಪುಗಾಲಿರಿಸಿದೆ. ಈ ವರೆಗಿನ ಫಲಿತಾಂಶಗಳ ಅನ್ವಯ ಒಟ್ಟು 70ಕ್ಷೇತ್ರಗಳ ಪೈಕಿ ಬಿಜೆಪಿ 43 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಎಎಪಿ 27 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಅಂತೆಯೇ ದೆಹಲಿ ಮುಖ್ಯಮಂತ್ರಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೂ ದೆಹಲಿ ಜನತೆ ಶಾಕ್ ನೀಡಿದ್ದು, ಇಬ್ಬರೂ ನಾಯಕರು ಸೋಲು ಕಂಡಿದ್ದಾರೆ.
ಈ ಹೀನಾಯ ಸೋಲಿನ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, 'ಜನರ ಜನಾದೇಶವನ್ನು ನಾವು ಅತ್ಯಂತ ನಮ್ರತೆಯಿಂದ ಸ್ವೀಕರಿಸುತ್ತೇವೆ. ಈ ಗೆಲುವಿಗಾಗಿ ನಾನು ಬಿಜೆಪಿಯನ್ನು ಅಭಿನಂದಿಸುತ್ತೇನೆ ಮತ್ತು ಜನರು ಅವರಿಗೆ ಮತ ಹಾಕಿದ ಎಲ್ಲಾ ಭರವಸೆಗಳನ್ನು ಅವರು ಈಡೇರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.
ಅಂತೆಯೇ, 'ಕಳೆದ 10 ವರ್ಷಗಳಲ್ಲಿ ನಾವು ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ಹೀಗಾಗಿ ಈ ಚುನಾವಣಾ ಫಲಿತಾಂಶವನ್ನು ನಾವು ನಿರೀಕ್ಷಿಸಿರಲಿಲ್ಲ. ತಮ್ಮ ಪಕ್ಷವು ಎಂದಿಗೂ ಅಧಿಕಾರಕ್ಕಾಗಿ ರಾಜಕೀಯದಲ್ಲಿರಲ್ಲ. ಜನರ ಸೇವೆಯೇ ನಮ್ಮ ಪಕ್ಷದ ಮುಖ್ಯ ಧ್ಯೇಯೋದ್ದೇಶವಾಗಿತ್ತು. ಜನರಿಗೆ ಸೇವೆ ಸಲ್ಲಿಸುವುದನ್ನು ನಮ್ಮ ಪಕ್ಷ ಮುಂದುವರಿಸುತ್ತದೆ. ರಚನಾತ್ಮಕ ವಿರೋಧ ಪಕ್ಷದ ಪಾತ್ರವನ್ನು ವಹಿಸುವುದಲ್ಲದೆ, ಜನರ ನಡುವೆಯೇ ಇದ್ದು ಅವರಿಗೆ ಸೇವೆ ಸಲ್ಲಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
Advertisement