
ಹೈದರಾಬಾದ್: ದೆಹಲಿ ವಿಧಾನಸಭೆ ಚುನಾವಣೆ ಮೂಲಕ ಬಿಜೆಪಿ ಪಕ್ಷಕ್ಕೆ ಮತ್ತೊಂದು ಗೆಲುವು ತಂದು ಕೊಟ್ಟ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳು ಎಂದು BRS ನಾಯಕ ಹಾಗೂ ತೆಲಂಗಾಣ ಮಾಜಿ ಸಚಿವ ಕೆಟಿ ರಾಮಾರಾವ್ ವ್ಯಂಗ್ಯ ಮಾಡಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಪಕ್ಷ ಸೋಲಿನತ್ತ ಮುಖ ಮಾಡಿದ್ದು, ಬಿಜೆಪಿ ಭಾರಿ ಅಂತರದ ಗೆಲುವಿನತ್ತ ದಾಪುಗಾಲಿರಿಸಿದೆ. ಈ ವರೆಗಿನ ಫಲಿತಾಂಶಗಳ ಅನ್ವಯ ಒಟ್ಟು 70ಕ್ಷೇತ್ರಗಳ ಪೈಕಿ ಬಿಜೆಪಿ 43 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಎಎಪಿ 27 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದ್ದು, ತಾನು ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳಲ್ಲೂ ಹಿನ್ನಡೆಯಲ್ಲಿದೆ. ಆ ಮೂಲಕ ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ ಸತತ ಮೂರನೇ ಬಾರಿಗೆ ಶೂನ್ಯ ಸಾಧನೆಯತ್ತ ದಾಪುಗಾಲಿರಿಸಿದ್ದು, ಶೂನ್ಯ ಸಾಧನೆಯಲ್ಲೂ ಹ್ಯಾಟ್ರಿಕ್ ಮಾಡಿದೆ.
ಈ ನಡುವೆ ದೆಹಲಿ ಚುನಾವಣೆಗೆ ಸಂಬಂಧಿಸಿದಂತೆ ಎಎಪಿ ಸೋಲಿಗೆ ಕಾಂಗ್ರೆಸ್ ಕಾರಣ ಎಂಬ ಟೀಕೆಗಳು ಉದ್ಭವಾಗಿದ್ದು, ಇದೇ ವಿಚಾರವಾಗಿ ಕಾಂಗ್ರೆಸ್ ವಿರುದ್ದ ಕಿಡಿಕಾರಿರುವ ಬಿಆರ್ ಎಸ್ ಪಕ್ಷದ ನಾಯಕ ಹಾಗೂ ತೆಲಂಗಾಣ ಮಾಜಿ ಸಚಿವ ಕೆಟಿ ರಾಮಾರಾವ್ ಅವರು, 'BJPಗೆ ಮತ್ತೊಂದು ಜಯ ತಂದುಕೊಟ್ಟಿದ್ದಕ್ಕೆ Rahul Gandhiಗೆ ಧನ್ಯವಾದಗಳು' ಎಂದು ಹೇಳಿದ್ದಾರೆ.
'ದೆಹಲಿ ಚುನಾವಣೆ ಮೂಲಕ ರಾಹುಲ್ ಗಾಂಧಿಗೆ ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯವಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಅವರು ತಮ್ಮನ್ನು ತಾವು ಗೆಲ್ಲಿಸಿಕೊಳ್ಳುವುದೂ ಇಲ್ಲ.. ಬೇರೆವರೂ ಗೆಲಲ್ಲು ಬಿಡುವುದಿಲ್ಲ. ತಮ್ಮ ಸ್ವಾರ್ಥದ ಮೂಲಕ ಅವರು ಇಂಡಿಯಾ ಮೈತ್ರಿಕೂಟದ ಬಲಿಷ್ಠ ಪ್ರಾದೇಶಿಕ ಪಕ್ಷಗಳಾದ ಎಎಪಿ, ಬಿಆರ್ ಎಸ್ ನಂತಹ ಸ್ಥಳೀಯ ಪಕ್ಷಗಳನ್ನೂ ದುರ್ಬಲ ಮಾಡುತ್ತಿದ್ದಾರೆ. ಆ ಮೂಲಕ ಬಿಜೆಪಿ ಪಕ್ಷವನ್ನು ಶಕ್ತಿಶಾಲಿಗೊಳಿಸಿ ಆ ಪಕ್ಷ ಗೆಲ್ಲಲು ಪರೋಕ್ಷ ನೆರವಾಗುತ್ತಿದ್ದಾರೆ. ದೆಹಲಿ ಚುನಾವಣೆ ಮೂಲಕ ಮತ್ತೆ ಬಿಜೆಪಿಗೆ ಮತ್ತೊಂದು ಗೆಲುವು ತಂದುಕೊಟ್ಟಿದ್ದಕ್ಕಾಗಿ ರಾಹುಲ್ ಗಾಂಧಿ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಈ ಸಾಧನೆಯ ಬಗ್ಗೆ ಅವರು ತುಂಬಾ ಹೆಮ್ಮೆಪಡುತ್ತಾರೆ ಎಂದು ನನಗೆ ಖಚಿತವಾಗಿದೆ ಎಂದು ಕೆಟಿ ರಾಮಾರಾವ್ ವ್ಯಂಗ್ಯ ಮಾಡಿದ್ದಾರೆ.
Advertisement