
ತಿರುಮಲ: ಹಿಂದೂಗಳ ಖ್ಯಾತ ಪವಿತ್ರ ಯಾತ್ರಾತಾಣ ತಿರುಪತಿ ತಿರುಮಲದಲ್ಲಿ ನಡೆದಿದೆ ಎನ್ನಲಾದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಭಾನುವಾರ ನಾಲ್ವರನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತನಿಖೆ ನಡೆಸಿದ್ದ ಹೈದರಾಬಾದ್ ವಿಭಾಗದ ಜಂಟಿ ನಿರ್ದೇಶಕ ವೀರೇಶ್ ಪ್ರಭು, ವಿಶಾಖಪಟ್ಟಣಂ ಸಿಬಿಐ ಎಸ್ಪಿ ಮುರಳೀರಾಂಬ, ವಿಶಾಖಪಟ್ಟಣಂ ಡಿಐಜಿ ಗೋಪಿನಾಥ್ ಜೆಟ್ಟಿ, ಗುಂಟೂರು ಐಜಿ ಸರ್ವಶ್ರೇಷ್ಠಿ ತ್ರಿಪಾಠಿ ಮತ್ತು ಎಫ್‌ಎಸ್‌ಎಸ್‌ಎಐ ಅಧಿಕಾರಿ ಸತ್ಯಕುಮಾರ್ ಪಾಂಡಾ ನೇತೃತ್ವದ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ವಿಪಿನ್ ಜೈನ್ ಮತ್ತು ಪೊಮಿಲ್ ಜೈನ್ (ರೂರ್ಕಿ, ಉತ್ತರಾಖಂಡ), ವೈಷ್ಣವಿ ಡೈರಿಯ (ಪೂನಂಬಾಕ್ಕಂ) ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಮತ್ತು ಎಆರ್ ಡೈರಿ (ದುಂಡಿಗಲ್) ಎಂಡಿ ರಾಜು ರಾಜಶೇಖರನ್ ಇವರುಗಳು ಲಡ್ಡು ಪ್ರಸಾದ ಕಲಬೆರಕೆ ಹಗರಣದಲ್ಲಿ ಬಂಧಿತರಾಗಿರುವ ಆರೋಪಿಗಳಾಗಿದ್ದಾರೆ. ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ಅಧಿಕಾರಿಗಳು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತನಿಖಾ ತಂಡ ತಿಳಿಸಿದೆ.
ಮೂಲಗಳ ಪ್ರಕಾರ ಆರೋಪಿಗಳನ್ನು ಅಪರಾಧ ಸಂಖ್ಯೆ 470/24 ರ ಅಡಿಯಲ್ಲಿ ಬಂಧಿಸಿ ತಿರುಪತಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತನಿಖೆಯಲ್ಲಿ ತುಪ್ಪ ಪೂರೈಕೆಯಲ್ಲಿ ಪಾಲಿಸಬೇಕಾದ ನಿಯಮಗಳ ಉಲ್ಲಂಘನೆಯಾಗಿರುವುದು ಬಹಿರಂಗವಾಗಿದೆ. ಇದರಲ್ಲಿ ಟೆಂಡರ್ ಪಡೆಯಲು ನಕಲಿ ದಾಖಲೆಗಳು ಮತ್ತು ಸ್ಟ್ಯಾಂಪ್‌ಗಳನ್ನು ಬಳಸಿರುವುದು ಕೂಡ ಸೇರಿಕೊಂಡಿದೆ. ವೈಷ್ಣವಿ ಡೈರಿಯು ಭೋಲೆ ಬಾಬಾ ಡೈರಿಯ ತುಪ್ಪ ಪೂರೈಕೆಯ ನಿಯಮಗಳನ್ನು ತಿರುಚಿರುವುದು ಬೆಳಕಿಗೆ ಬಂದಿದೆ. ವಿಚಾರಣೆಯಲ್ಲಿ ಪೂರೈಕೆಯಲ್ಲಿ ಹಲವು ವ್ಯತ್ಯಾಸಗಳು ಮತ್ತು ಸುಳ್ಳು ದಾಖಲೆಗಳನ್ನು ನೀಡಿರುವುದು ಕಂಡುಬಂದಿವೆ.
ಇತ್ತೀಚೆಗೆ, ಈ ಘಟನೆಯಲ್ಲಿ ಎಸ್‌ಐಟಿ ನಾಲ್ವರನ್ನು ಬಂಧಿಸಿತ್ತು. ಇವುಗಳಲ್ಲಿ ಎಆರ್ ಡೈರಿ, ಪರಾಗ್ ಫುಡ್ಸ್, ಪ್ರೀಮಿಯರ್ ಅಗ್ರಿ ಫುಡ್ಸ್ ಮತ್ತು ಆಲ್ಫಾ ಮಿಲ್ಕ್ ಫುಡ್ಸ್ ಸೇರಿವೆ. ಅಲ್ಲದೆ ವಿಶೇಷವಾಗಿ ತಿರುಮಲ ಲಡ್ಡು ವಿವಾದದ ಕುರಿತು ರಚಿಸಲಾದ ಎಸ್‌ಐಟಿಯಲ್ಲಿ, ಸಿಬಿಐ ಜೆಸಿ ವೀರೇಶ್ ಪ್ರಭು ತಿರುಪತಿಯಲ್ಲಿಯೇ ಇದ್ದು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಏನಿದು ಪ್ರಕರಣ?
ಇತ್ತೀಚೆಗೆ ತಿರುಪತಿ ತಿರುಮಲದಲ್ಲಿ (Tirupati Tirumala) ನೀಡುವ ಲಡ್ಡು ಪ್ರಸಾದದಲ್ಲಿ (Laddu) ದನದ ಕೊಬ್ಬು ಮಿಶ್ರಣ ಮಾಡಲಾಗಿದೆ ಎಂಬ ಅಘಾತಕಾರಿ ಅಂಶ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅಲ್ಲದೆ ಶ್ರೀವಾರಿ ಭಕ್ತರ ನಂಬಿಕೆಗೆ ಘಾಸಿಗೊಳಿಸಲಾಗಿದೆ, ಹಿಂದೂ ಧರ್ಮೀಯರ ನಂಬಿಕೆಗೆ ಅಪಮಾನ ಮಾಡಲಾಗಿದೆ ಎಂದು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ತಿರುಮಲದಲ್ಲಿ ಪ್ರಸಾದದ ರೂಪದಲ್ಲಿ ನೀಡುವ ಲಡ್ಡುವಿನಲ್ಲಿ ಹಸುವಿನ ಕೊಬ್ಬು ಮತ್ತು ಪ್ರಾಣಿಗಳ ತ್ಯಾಜ್ಯ ಮಿಶ್ರಣ ಮಾಡಲಾಗಿದೆ ಎಂದು ಚಂದ್ರಬಾಬು ನಾಯ್ಡು ಸರ್ಕಾರ ಆರೋಪಿಸಿತ್ತು. ಅವರು ಈ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರ ತಿರುಮಲ ಲಡ್ಡುವಿನ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದರು.
Advertisement