
ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಅಂತ್ಯಗೊಳ್ಳಲು ಕೇವಲ 15 ದಿನಗಳು ಬಾಕಿ ಉಳಿದಿದ್ದು, ಜನವರಿ 13 ರಂದು ಕಾರ್ಯಕ್ರಮ ಪ್ರಾರಂಭವಾದಾಗಿನಿಂದ 45 ಕೋಟಿಗೂ ಹೆಚ್ಚು ಜನರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ತಿಳಿಸಿದೆ.
ಮಹಾಕುಂಭ ಮೇಳವು ಫೆಬ್ರುವರಿ 26 ರಂದು ಮಹಾಶಿವರಾತ್ರಿಯ ಸಂದರ್ಭದಲ್ಲಿ ಕೊನೆಯ ಪ್ರಮುಖ ಪವಿತ್ರ 'ಸ್ನಾನ'ದೊಂದಿಗೆ ಕೊನೆಗೊಳ್ಳಲಿದೆ.
ಮಹಾಕುಂಭ ಮೇಳದ ಅಂತ್ಯದ ವೇಳೆಗೆ ಸುಮಾರು 55 ಕೋಟಿ ಜನರು ಪ್ರಯಾಗ್‌ರಾಜ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಮಕರ ಸಂಕ್ರಾಂತಿ, ಮೌನಿ ಅಮಾವಾಸ್ಯೆ ಮತ್ತು ಬಸಂತ್ ಪಂಚಮಿಯಂದು ಮೂರು ಮಹತ್ವದ ಅಮೃತ ಸ್ನಾನದ ನಂತರವೂ, ಪವಿತ್ರ ನಗರಕ್ಕೆ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಿದೆ ಎಂದು ರಾಜ್ಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಮಂಗಳವಾರ ಬೆಳಗ್ಗೆ 10 ಗಂಟೆ ವೇಳೆಗೆ 74.96 ಲಕ್ಷ ಜನರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಹೇಳಿಕೆಯ ಪ್ರಕಾರ, ಮೌನಿ ಅಮಾವಾಸ್ಯೆಯಂದು ಪ್ರಯಾಗರಾಜ್‌ಗೆ ಬರೋಬ್ಬರಿ 8 ಕೋಟಿ ಜನರು ಭೇಟಿ ನೀಡಿದ್ದು, ಅವರೆಲ್ಲರೂ ಪವಿತ್ರ ಸ್ನಾನ ಮಾಡಿದ್ದಾರೆ. ಅಲ್ಲದೆ, ಮಕರ ಸಂಕ್ರಾಂತಿಯಂದು 3.5 ಕೋಟಿ ಜನರು ಮತ್ತು ಬಸಂತ್ ಪಂಚಮಿಯಂದು 2.57 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಇದರೊಂದಿಗೆ ಬಾಲಿವುಡ್ ನಟರಾದ ಅನುಪಮ್ ಖೇರ್, ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್, ಕ್ರಿಕೆಟಿಗ ಸುರೇಶ್ ರೈನಾ ಮತ್ತು ಕುಸ್ತಿಪಟು ಖಲಿ ಸೇರಿದಂತೆ ಪ್ರಮುಖರು ಮಹಾಕುಂಭದಲ್ಲಿ ಭಾಗವಹಿಸಿದ್ದರು ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
Advertisement