ಅಶ್ಲೀಲ ಹೇಳಿಕೆ ವಿವಾದ: ರಣವೀರ್ ಅಲ್ಲಾಬಾಡಿಯಾ, ಸಮಯ್ ರೈನಾ ಮತ್ತಿತರ 28 ಜನರ ವಿರುದ್ಧ FIR ದಾಖಲು
ಮುಂಬೈ: ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅಶ್ಲೀಲ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಮಹಾರಾಷ್ಟ್ರ ಸೈಬರ್ ಇಲಾಖೆಯು ಯೂಟ್ಯೂಬ್ ಶೋ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ವಿರುದ್ಧ ಪ್ರಕರಣ ದಾಖಲಿಸಿದೆ. ಶೋನ ಮೊದಲ ಸಂಚಿಕೆಯಿಂದ ಭಾಗಿಯಾಗಿದ್ದ ಸುಮಾರು 30 ಜನರಿಗೆ ಸಮನ್ಸ್ ಕಳುಹಿಸಲಾಗುತ್ತಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅಲ್ಲಾಬಾಡಿಯಾ ಅವರ ಆಕ್ಷೇಪಾರ್ಹ ಹೇಳಿಕೆಗಳು ವಿವಾದಕ್ಕೆ ಕಾರಣವಾದ ನಂತರ ಸೈಬರ್ ಸೆಲ್ ಎಫ್ಐಆರ್ ದಾಖಲಿಸಿದೆ. ಹಾಸ್ಯ ಕಾರ್ಯಕ್ರಮದ ಎಲ್ಲಾ 18 ಸಂಚಿಕೆಗಳನ್ನು ತೆಗೆದುಹಾಕಲು ಒತ್ತಾಯಿಸಿದೆ.
ನ್ಯಾಯಾಧೀಶರು ಮತ್ತು ಅತಿಥಿಗಳು ಸೇರಿದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಲವು ಮಂದಿ "ಅಶ್ಲೀಲ ಮತ್ತು ಅವಹೇಳನಕಾರಿ ಭಾಷೆ ಬಳಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.ಪರಿಣಾಮವಾಗಿ ಈ ವ್ಯಕ್ತಿಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಪಟ್ಟಿ ಮಾಡಲಾಗಿದೆ.
ಅಲ್ಲಾಬಾಡಿಯಾ ಹೇಳಿಕೆ ನಂತರ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮುಂಬೈನಲ್ಲಿ ಹಲವಾರು ದೂರುಗಳನ್ನು ದಾಖಲಿಸಲಾಗಿದೆ. ಜೊತೆಗೆ ನಿಂದನೀಯ ಭಾಷೆಯ ಬಳಕೆ ಆರೋಪದ ಮೇಲೆ ಅಪೂರ್ವ ಮುಖಿಜಾ ಮತ್ತು ಹಾಸ್ಯನಟ ಸಮಯ್ ರೈನಾ ಸೇರಿದಂತೆ ಶೋಗೆ ಸಂಬಂಧಿಸಿದ ಹಲವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ರಾಷ್ಟ್ರೀಯ ಮಹಿಳಾ ಆಯೋಗ (NCW) ಪಾಡ್‌ಕ್ಯಾಸ್ಟರ್, ಹಾಸ್ಯನಟ ಸಮಯ್ ರೈನಾ ಮತ್ತಿತರರಿಗೆ ಸಮನ್ಸ್ ಜಾರಿ ಮಾಡಿದೆ. ವಿವಾದಾತ್ಮಕ ವಿಷಯದ ಕುರಿತು NCW ಯಿಂದ ವರದಿ ಕೇಳಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಹೇಳಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ