
ಅಮೃತಸರ: ಅಮೆರಿಕದಿಂದ ಗಡಿಪಾರಾದ ಭಾರತೀಯರನ್ನು ಹೊತ್ತ ಎರಡನೇ ವಿಮಾನ ಪಂಜಾಬಿನ ಅಮೃತಸರದಲ್ಲಿ ಬಂದಿಳಿಯುತ್ತಿದ್ದಂತೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿದ್ದ ಹರಿಯಾಣದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಅಮೆರಿಕದಿಂದ ಭಾರತಕ್ಕೆ ವಾಪಸ್ ಆದ ಎರಡನೇ ಬ್ಯಾಚಿನ ಅಕ್ರಮ ವಲಸಿಗಾರರಲ್ಲಿ ಕುರುಕ್ಷೇತ್ರ ಜಿಲ್ಲೆಯ ಮೂವರು ಸೇರಿದಂತೆ ಹರಿಯಾಣದ 33 ಮಂದಿ ಇದ್ದಾರೆ. 116 ಭಾರತೀಯ ವಲಸಿಗರಿದ್ದ ಅಮೆರಿಕದ ಮಿಲಿಟರಿ ವಿಮಾನ ಶನಿವಾರ ತಡರಾತ್ರಿ ಅಮೃತಸರದಲ್ಲಿ ಬಂದಿಳಿಯಿತು.
2022ರ ಮೇ 14 ರಂದು ದಾಖಲಾಗಿದ್ದ ಕ್ರಿಮಿನಲ್ ಬೆದರಿಕೆ ಮತ್ತು ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಪೆಹೋವಾದ ಸಾಹಿಲ್ ವರ್ಮಾ ವಿರುದ್ಧ ಲುಕ್ ಜೌಟ್ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಕುರುಕ್ಷೇತ್ರದ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಸಿಂಗಲಾ ತಿಳಿಸಿದ್ದಾರೆ.
ಅಮೆರಿಕದಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೂಚನೆಯಂತೆ ಗಡೀಪಾರು ಮಾಡಲಾಗುತ್ತಿದ್ದು, ಕಳೆದ ವಾರ 104 ಅಕ್ರಮ ವಲಸಿಗರಿದ್ದ ಅಮೆರಿಕದ ಮಿಲಿಟರಿ ವಿಮಾನವೂ ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು.
Advertisement