
ನವದೆಹಲಿ: ಇತ್ತೀಚೆಗಷ್ಟೇ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯಕ್ಕೆ ತೃಪ್ತಿಪಟ್ಟುಕೊಂಡಿದ್ದು, ಪಕ್ಷದ ಸೋಲಿನ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಈ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳ ಸಭೆ ನಡೆಸಿದ್ದಾರೆ. ಭವಿಷ್ಯದ ಚುನಾವಣಾ ಫಲಿತಾಂಶಗಳಿಗೆ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಪ್ರಧಾನ ಕಛೇರಿ ಇಂದಿರಾ ಭವನದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಮುಖಂಡರು ತಳಮಟ್ಟದಲ್ಲಿ ಕೆಲಸ ಮಾಡಿ ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸಬೇಕು ಮತ್ತು ಸಂಘಟನೆಗೆ ಸೈದ್ಧಾಂತಿಕವಾಗಿ ಬದ್ಧರಾಗಿರುವವರನ್ನು ಉತ್ತೇಜಿಸಬೇಕು. ಈಗಾಗಲೇ ಕೆಲವು ಬದಲಾವಣೆಗಳು ನಡೆದಿವೆ ಮತ್ತು ಇನ್ನೂ ಕೆಲವು ಬದಲಾವಣೆಗಳು ನಡೆಯುತ್ತವೆ ಎಂದು ಹೇಳಿದ್ದಾರೆ.
'ಜವಾಬ್ದಾರಿಯ ಪ್ರಮುಖ ವಿಷಯದ ಬಗ್ಗೆ ನಾನು ನಿಮ್ಮೊಂದಿಗೆ ಮಾತನಾಡಲು ಬಯಸುತ್ತೇನೆ. ರಾಜ್ಯಗಳಲ್ಲಿ ಪಕ್ಷವನ್ನು ಪುನರುಜ್ಜೀವನಗೊಳಿಸಲು ಮತ್ತು ಮುಂಬರುವ ಎಲ್ಲ ಚುನಾವಣೆ ಫಲಿತಾಂಶಗಳಿಗಾಗಿ ನಿಮ್ಮೆಲ್ಲರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು' ಎಂದು ಅವರು ಪದಾಧಿಕಾರಿಗಳಿಗೆ ಹೇಳಿದರು.
ಪಕ್ಷವು ಇತ್ತೀಚೆಗಷ್ಟೇ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಿದೆ. ಸಭೆಯಲ್ಲಿ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಎಲ್ಲ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿವಿಧ ರಾಜ್ಯಗಳ ಉಸ್ತುವಾರಿಗಳು ಭಾಗವಹಿಸಿದ್ದಾರೆ.
'ಬೂತ್ ಮಟ್ಟದಿಂದ ಕೇಂದ್ರ ಕಚೇರಿವರೆಗೆ ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಕಷ್ಟಕಾಲದಲ್ಲಿ ಪಕ್ಷದ ಬೆನ್ನಿಗೆ ಬಂಡೆಯಂತೆ ನಿಲ್ಲುವ ಸೈದ್ಧಾಂತಿಕ ಬದ್ಧತೆ ಇರುವವರನ್ನು ಪಕ್ಷಕ್ಕೆ ಕರೆತರಬೇಕು. ಪಕ್ಷವನ್ನು ಬಲಪಡಿಸಲು ಪ್ರಯತ್ನಿಸುವಾಗ, ಕೆಲವೊಮ್ಮೆ ಕಷ್ಟದ ಸಮಯದಲ್ಲಿ ಓಡಿಹೋಗುವವರನ್ನು ತರಾತುರಿಯಲ್ಲಿ ಕರೆತರಲಾಗುತ್ತದೆ. ಅಂತಹವರಿಂದ ನಾವು ದೂರವಿರಬೇಕು' ಎಂದು ಪಕ್ಷದ ಮುಖಂಡರಿಗೆ ತಿಳಿಸಿದರು.
ದೆಹಲಿ ಜನತೆಯು ಬದಲಾವಣೆಗೆ ಮತ ಚಲಾಯಿಸಿದ್ದಾರೆ ಮತ್ತು ಸಂಪನ್ಮೂಲಗಳ ಕೊರತೆಯ ನಡುವೆಯೂ ಉತ್ತಮ ಹೋರಾಟ ನೀಡುವಲ್ಲಿ ಪ್ರಯತ್ನ ಮಾಡಿದ ರಾಜ್ಯ ನಾಯಕತ್ವವನ್ನು ಹೊಗಳಿಸದರು.
ಫೆಬ್ರುವರಿ 5ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ 26 ವರ್ಷಗಳ ನಂತರ ದೆಹಲಿಯಲ್ಲಿ ಅಧಿಕಾರಕ್ಕೆ ಮರಳಿದೆ. 70 ವಿಧಾನಸಭಾ ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದುಕೊಂಡಿದೆ. ಎಎಪಿ 22 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಶೂನ್ಯಕ್ಕೆ ತೃಪ್ತಿಪಟ್ಟುಕೊಂಡಿದೆ.
ಮುಂದಿನ ಐದು ವರ್ಷಗಳಲ್ಲಿ ಪಕ್ಷದ ನಾಯಕರು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಪ್ರಸ್ತಾಪಿಸಬೇಕು ಮತ್ತು ಪಕ್ಷವನ್ನು ದೆಹಲಿಯಲ್ಲಿ ಪ್ರಧಾನ ವಿರೋಧ ಪಕ್ಷವಾಗಿ ಮಾರ್ಪಡಿಸಲು ಶ್ರಮಿಸಬೇಕು ಎಂದು ಖರ್ಗೆ ಹೇಳಿದರು.
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅಮೆರಿಕದಿಂದ ಗಡಿಪಾರು ಮಾಡಿದ ಭಾರತೀಯರಿಗೆ ಆಗಿರುವ ಅವಮಾನವನ್ನು ತಡೆಯಲು ಪ್ರಧಾನಿ ವಿಫಲರಾಗಿದ್ದಾರೆ. ಭಾರತದ ಮೇಲೆ ಅಮೆರಿಕ ಹೇರುತ್ತಿರುವ ಸುಂಕವನ್ನು ವಿರೋಧಿಸಲು ಪ್ರಧಾನಿ ವಿಫಲರಾಗಿದ್ದಾರೆ. ಇದು ದೇಶಕ್ಕೆ ಮಾತ್ರವಲ್ಲದೆ ಎಲ್ಲ ಭಾರತೀಯರಿಗೆ ಮಾಡಿದ ಅವಮಾನವಾಗಿದೆ' ಎಂದು ಆರೋಪಿಸಿದರು.
Advertisement