
ಹೈದರಾಬಾದ್: ಕಾಳೇಶ್ವರಂ ಯೋಜನೆಯ ಭಾಗವಾಗಿ ಮೇಡಿಗಡ್ಡ ಬ್ಯಾರೇಜ್ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಇತರರ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿ ಜಯಶಂಕರ್ ಭೂಪಾಲಪಲ್ಲಿ ಪಟ್ಟಣದಲ್ಲಿ ಬುಧವಾರ ಕೊಲೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿಂದೆ ಯಾವುದೇ ರಾಜಕೀಯ ದೃಷ್ಟಿಕೋನವನ್ನು ಪೊಲೀಸರು ತಳ್ಳಿಹಾಕಿದ್ದಾರೆ. 50 ವರ್ಷದ ಎನ್ ರಾಜಲಿಂಗಮೂರ್ತಿ ಎಂಬ ವ್ಯಕ್ತಿಯನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಜಮೀನು ವಿವಾದದ ಹಿನ್ನೆಲೆಯಲ್ಲಿ ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ಹೇಳಿದ್ದಾರೆ.
ಬುಧವಾರ ರಾತ್ರಿ 7.30ರ ಸುಮಾರಿಗೆ ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದ ರಾಜಲಿಂಗಮೂರ್ತಿ ಅವರನ್ನು ಇಬ್ಬರು ವ್ಯಕ್ತಿಗಳು ಅಡ್ಡಗಟ್ಟಿದ್ದಾರೆ. ಬಳಿಕ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಬಳಿಕ ಆಸ್ಪತ್ರೆಗೆ ಸಾಗಿಸುವಾಗ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಲಿಂಗಮೂರ್ತಿ ಅವರು ಈ ಹಿಂದೆ 2023ರ ಅಕ್ಟೋಬರ್‌ನಲ್ಲಿ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಮೇಡಿಗಡ್ಡ ಬ್ಯಾರೇಜ್ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕೆಸಿಆರ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರಿದ್ದರು.
ಕೆಳ ನ್ಯಾಯಾಲಯವು ಕಳೆದ ವರ್ಷ ಡಿಸೆಂಬರ್‌ನಲ್ಲಿ ತಮ್ಮ ವಿರುದ್ಧ ಅರ್ಜಿ ಸಲ್ಲಿಸಲು ಅನುಮತಿ ನೀಡಿ ಆದೇಶ ಹೊರಡಿಸಿದ್ದನ್ನು ಪ್ರಶ್ನಿಸಿ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಮತ್ತು ಅವರ ಸೋದರಳಿಯ ಮತ್ತು ಮಾಜಿ ಸಚಿವ ಟಿ. ಹರೀಶ್ ರಾವ್ ಅವರು ತೆಲಂಗಾಣ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಈ ವೇಳೆ ಕೆಳ ನ್ಯಾಯಾಲಯದ ಆದೇಶಕ್ಕೆ ತೆಲಂಗಾಣ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿತ್ತು.
Advertisement