ಸುರಂಗ ಮಾರ್ಗದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದು.
ಸುರಂಗ ಮಾರ್ಗದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದು.

ತೆಲಂಗಾಣ ಸುರಂಗ ಕುಸಿತ ಪ್ರಕರಣ; ಜಾರ್ಖಂಡ್‌ನ ನಾಲ್ವರು ಕಾರ್ಮಿಕರು ಸೇರಿ 8 ಮಂದಿ ಸಿಲುಕಿರುವ ಶಂಕೆ, ನೆರವಿನ ಭರವಸೆ ನೀಡಿದ ಸಿಎಂ ಸೊರೇನ್

ಶ್ರೀಶೈಲಂನಿಂದ ದೇವರಕೊಂಡಕ್ಕೆ ನೀರು ಸಾಗಿಸಲು ನಿರ್ಮಿಸಲಾಗುತ್ತಿರುವ ಈ ಸುರಂಗದೊಳಗಿನ ಸೋರಿಕೆ ಸರಿಪಡಿಸಲು 50 ಜನರಿದ್ದ ಕಾರ್ಮಿಕರ ಗುಂಪು ತೆರಳಿತ್ತು. ಆದರೆ ಕಾರ್ಯಾಚರಣೆ ವೇಳೆ ಸುರಂಗದ ಮೇಲ್ಭಾಗದ 10 ಮೀ. ವ್ಯಾಪ್ತಿಯ ಪ್ರದೇಶ ಏಕಾಏಕಿ ಕುಸಿದಿದ್ದು, 200 ಮೀ.ಗೂ ಹೆಚ್ಚು ಪ್ರದೇಶದಲ್ಲಿ ಮಣ್ಣು ಬಿದ್ದಿದೆ.
Published on

ಹೈದರಾಬಾದ್‌: ತೆಲಂಗಾಣದ ನಾಗರ್‌ ಕರ್ನೂಲ್‌ ಜಿಲ್ಲೆಯಲ್ಲಿರುವ ಶ್ರೀಶೈಲಂ ಅಣೆಕಟ್ಟಿನ ಎಡದಂಡೆ ಕಾಲುವೆ (ಎಸ್‌ ಎಲ್‌ಬಿಸಿ)ಯ ಭಾಗವಾದ ನಿರ್ಮಾಣ ಹಂತದ ಸುರಂಗವೊಂದು ಶನಿವಾರ ಕುಸಿದಿದ್ದು, ಜಾರ್ಖಂಡ್‌ನ ನಾಲ್ವರು ಕಾರ್ಮಿಕರು ಸೇರಿ 8 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಶ್ರೀಶೈಲಂನಿಂದ ದೇವರಕೊಂಡಕ್ಕೆ ನೀರು ಸಾಗಿಸಲು ನಿರ್ಮಿಸಲಾಗುತ್ತಿರುವ ಈ ಸುರಂಗದೊಳಗಿನ ಸೋರಿಕೆ ಸರಿಪಡಿಸಲು 50 ಜನರಿದ್ದ ಕಾರ್ಮಿಕರ ಗುಂಪು ತೆರಳಿತ್ತು. ಆದರೆ ಕಾರ್ಯಾಚರಣೆ ವೇಳೆ ಸುರಂಗದ ಮೇಲ್ಭಾಗದ 10 ಮೀ. ವ್ಯಾಪ್ತಿಯ ಪ್ರದೇಶ ಏಕಾಏಕಿ ಕುಸಿದಿದ್ದು, 200 ಮೀ.ಗೂ ಹೆಚ್ಚು ಪ್ರದೇಶದಲ್ಲಿ ಮಣ್ಣು ಬಿದ್ದಿದೆ. ಸುರಂಗದ ಹೊರತುದಿ ಯಿಂದ 14 ಕಿ.ಮೀ. ಒಳಗೆ ಈ ಘಟನೆ ನಡೆದಿದ್ದು, 42 ಕಾರ್ಮಿಕರು ಹೊರ ಬಂದು ಜೀವ ಉಳಿಸಿಕೊಂಡಿದ್ದಾರೆ. ಗಾಯಗೊಂಡಿರುವ 13 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೀಗ ಸುರಂಗದೊಳಗೆ ಸಿಲುಕಿದವರ ಸಂಪರ್ಕಕ್ಕಾಗಿ ಪ್ರಯತ್ನ ಮುಂದುವರಿದಿದ್ದು, ರಕ್ಷಣ ಕಾರ್ಯಾಚರಣೆ ಭರದಿಂದ ಸಾಗಿದೆ.

ಈ ನಡುವೆ ಸ್ಥಳಕ್ಕೆ ತೆಲಂಗಾಣ ರಾಜ್ಯದ ನೀರಾವರಿ ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ ಮತ್ತು ಪ್ರವಾಸೋದ್ಯಮ ಸಚಿವ ಜೂಪಲ್ಲಿ ಕೃಷ್ಣ ರಾವ್ ಅವರು ಭೇಟಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಉತ್ತಮ್ ಕುಮಾರ್ ರೆಡ್ಡಿ ಅವರು, ಸುರಂಗದೊಳಗೆ ಸಿಲುಕಿರುವವರು ಸುರಕ್ಷಿತರಾಗಿ ಹೊರಬರಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.

ಸುರಂಗ ಮಾರ್ಗದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದು.
ತೆಲಂಗಾಣ: ನಿರ್ಮಾಣ ಹಂತದ ಸುರಂಗ ಕುಸಿತ, 6 ಕಾರ್ಮಿಕರು ಸಿಲುಕಿರುವ ಶಂಕೆ!

ಘಟನೆ ಬಳಿಕ ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರಿಗೆ ಕರೆ ಮಾಡಿದ್ದು, ಮಾಹಿತಿ ಪಡೆದುಕೊಂಡಿದ್ದು, ಈ ವೇಳೆ ಸರ್ಕಾರ ತೆಗೆದುಕೊಂಡಿರುವ ಕ್ರಮ ಹಾಗೂ ಮೇಲ್ವಿಚಾರಣೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ,

ಇದಲ್ಲದೆ, ನಿನ್ನೆ ಸಂಜೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೇವಂತ್ ರೆಡ್ಡಿಯವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ, ಮಾಹಿತಿ ಪಡೆದುಕೊಂಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಗಾಗಿ ತಕ್ಷಣವೇ NDRF ತಂಡಗಳನ್ನು ರವಾನಿಸಲಾಗಿದ್ದು, ಕೇಂದ್ರದಿಂದ ನೆರವಿನ ಭರವಸೆಯನ್ನು ಮೋದಿಯವರು ನೀಡಿದ್ದಾರೆಂದು ತಿಳಿದುಬಂದಿದೆ,

ಏತನ್ಮಧ್ಯೆ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರನ್ನು ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಸಾಧ್ಯವಿರುವ ಎಲ್ಲಾ ನೆರವುಗಳನ್ನು ಖಚಿತಪಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಸುರಂಗದಲ್ಲಿ ಜಾರ್ಖಾಂಡ್ ರಾಜ್ಯದ ನಾಲ್ವರು ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಕಾರ್ಮಿಕರಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ಒದಗಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಸುರಂಗದಲ್ಲಿ ಸಿಲುಕಿರುವ ಎಲ್ಲಾ ಕಾರ್ಮಿಕರು ಸುರಕ್ಷಿತರಾಗಿರಲಿ ಎಂದು ಪ್ರಾರ್ಥಿಸುತ್ತೇನೆ. ಜಾರ್ಖಂಡ್ ಸರ್ಕಾರ ತೆಲಂಗಾಣ ಆಡಳಿತದೊಂದಿಗೆ ಸಮನ್ವಯ ಸಾಧಿಸುತ್ತಿದ್ದು, ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸುರಂಗದಲ್ಲಿ ಸಿಲುಕಿರುವ ಜಾರ್ಖಂಡ್‌ನ ನಾಲ್ವರು ಕಾರ್ಮಿಕರು ಗುಮ್ಲಾ ಜಿಲ್ಲೆಗೆ ಸೇರಿದವರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯ ವಲಸೆ ನಿಯಂತ್ರಣ ಕೊಠಡಿ ಈ ಕಾರ್ಮಿಕರ ಬಗ್ಗೆ ತೆಲಂಗಾಣ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ ಎಂದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com