
ಥಾಣೆ: ಚಿತ್ರರಂಗದಲ್ಲಿ ಉತ್ತಮ ಅವಕಾಶಗಳನ್ನು ಕೊಡಿಸುವ ನೆಪದಲ್ಲಿ 34 ವರ್ಷದ ಮಹಿಳೆ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಇಲ್ಲಿನ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಥಾಣೆ ನಗರದ ಮಾಜಿವಾಡ ಪ್ರದೇಶದ ನಿವಾಸಿಯಾಗಿರುವ ಪರಿಶಿಷ್ಟ ಜಾತಿಗೆ ಸೇರಿದ ಸಂತ್ರಸ್ತೆಗೆ ಬೆದರಿಕೆ ಮತ್ತು ಬ್ಲಾಕ್‌ಮೇಲ್ ಮಾಡಿದ ಆರೋಪದ ಮೇಲೆ ಮತ್ತೊಬ್ಬ ಮಹಿಳೆ, ಆಕೆಯ ಪತಿ ಮತ್ತು ಅವರ ಮಗಳನ್ನು ಕೂಡ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಿಲ್ಲ. ಆರೋಪಿ ಮಹಿಳೆ ಸುಮಾರು ಮೂರು ವರ್ಷಗಳ ಹಿಂದೆ ಸಂತ್ರಸ್ತೆಯ ಸಂಪರ್ಕಕ್ಕೆ ಬಂದಿದ್ದಳು ಮತ್ತು ಚಿತ್ರರಂಗದ ದೊಡ್ಡ ದೊಡ್ಡ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವುದಾಗಿ ಹೇಳಿಕೊಂಡಿದ್ದಾಳೆ ಎಂದು ಥಾಣೆ ಜಿಲ್ಲೆಯ ಕಪುರ್ಬಾವಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಿಳೆಯು ಸಂತ್ರಸ್ತೆಯನ್ನು ದೊಡ್ಡ ತಾರೆಯಾಗಿ ಮಾಡುವುದಾಗಿ ಭರವಸೆ ನೀಡಿ, ಸಿಂಗಾಪುರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಅವರು ಪ್ರಭಾವಿ ವ್ಯಕ್ತಿ ಎಂದು ಹೇಳಿಕೊಂಡು ಮತ್ತೊಬ್ಬ ವ್ಯಕ್ತಿಗೆ ಪರಿಚಯ ಮಾಡಿಕೊಟ್ಟಿದ್ದಾರೆ ಎಂದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಪುರ್ಬಾವಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆ ವ್ಯಕ್ತಿ ಸಂತ್ರಸ್ತೆಯನ್ನು ಸಿಂಗಾಪುರದಲ್ಲಿರುವ ತನ್ನ ಮನೆಗೆ ಕರೆದೊಯ್ದು ಆಕೆಗೆ ಪಾನೀಯವನ್ನು ನೀಡಿದ್ದಾನೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ಮುಂಬೈ ಮತ್ತು ಇತರ ಸ್ಥಳಗಳಲ್ಲಿನ ಹೋಟೆಲ್‌ಗಳಲ್ಲಿ ವಿವಿಧ ಸಂದರ್ಭಗಳಲ್ಲಿ ಅತ್ಯಾಚಾರ ಎಸಗಿದ್ದಾನೆ. ಆಕ್ಷೇಪಾರ್ಹ ಕೃತ್ಯಗಳನ್ನು ವಿಡಿಯೋ ಮಾಡಿಕೊಂಡಿದ್ದು, ಆಕೆಯನ್ನು ಬ್ಲಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಂತರ, ಆರೋಪಿ ಮಹಿಳೆ, ಆಕೆಯ ಪತಿ ಮತ್ತು ಆಕೆಯ ಮಗಳು ಸಂತ್ರಸ್ತೆಗೆ ಪದೇ ಪದೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು ಮತ್ತು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದರು. ಆರೋಪಿಗಳು ಸಂತ್ರಸ್ತೆಯ ಜಾತಿನಿಂದನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಶನಿವಾರ ನಾಲ್ವರು ಆರೋಪಿಗಳ ವಿರುದ್ಧ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ಇತರ ಆರೋಪಗಳಿಗೆ ಸಂಬಂಧಿಸಿದ ಕಾನೂನು ನಿಬಂಧನೆಗಳ ಅಡಿಯಲ್ಲಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement