
ತಾಡಿಪುಡಿ: ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಗೋದಾವರಿ ನದಿಯಲ್ಲಿ ಮಹಾಶಿವರಾತ್ರಿ ದಿನವಾದ ಇಂದು ಬೆಳಗ್ಗೆ ಸ್ನಾನಕ್ಕೆಂದು ತೆರಳಿದ್ದ ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
12 ಜನರ ಗುಂಪಿನಲ್ಲಿ ಐವರು ನೀರಿನಲ್ಲಿ ಮುಳುಗಿದರೆ ಏಳು ಮಂದಿ ಬದುಕುಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ತಲ್ಲಪುಡಿ ಮಂಡಲದ ತಾಡಿಪುಡಿ ಗ್ರಾಮದಲ್ಲಿ ಬೆಳಗ್ಗೆ 8:30ರ ಸುಮಾರಿಗೆ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಸ್ನಾನ ಮಾಡಲೆಂದು ನದಿ ನೀರಿಗಿಳಿದ 12 ಜನರ ಗುಂಪಿನಲ್ಲಿ ಐವರು ಗೋದಾವರಿ ನದಿಯಲ್ಲಿ ಮುಳುಗಿದ್ದಾರೆ. ಅವರು ಶಿವರಾತ್ರಿ ಹಬ್ಬದ ಸ್ನಾನದ ನಂತರ ಹತ್ತಿರದ ದೇವಸ್ಥಾನಕ್ಕೆ ಹೋಗಲು ಉದ್ದೇಶಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತರು ಮತ್ತು ಬದುಕುಳಿದವರಲ್ಲಿ ಹೆಚ್ಚಿನವರು 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯರು ಮೃತರ ಶವಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
Advertisement