
ನವದೆಹಲಿ: ಮಾಜಿ ಪ್ರಧಾನಿ ದಿವಗಂತ ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಲು ಕೇಂದ್ರವು ಔಪಚಾರಿಕವಾಗಿ ಪ್ರಕ್ರಿಯೆ ಆರಂಭಿಸಿದೆ. ಗುರುವಾರ ನಡೆದ ಉನ್ನತ ಮಟ್ಟದ ಸಭೆಯ ನಂತರ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ರಾಷ್ಟ್ರೀಯ ಸ್ಮೃತಿ ಸ್ಥಳದ ಕ್ಯಾಂಪಸ್‌ನಲ್ಲಿ ಎರಡು ಸ್ಥಳಗಳನ್ನು ಗುರುತಿಸಿದೆ.
ರಾಷ್ಟ್ರೀಯ ಸ್ಮೃತಿ ಸ್ಥಳವು ಯಮುನಾ ನದಿ ದಂಡೆಯ ಉದ್ದಕ್ಕೂ ಇರುವ ಪ್ರದೇಶವಾಗಿದ್ದು, ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಮತ್ತು ಪ್ರಧಾನಮಂತ್ರಿಗಳ ಅಂತಿಮ ವಿಧಿಗಳು ಮತ್ತು ಸ್ಮಾರಕಗಳ ನಿರ್ಮಾಣಕ್ಕಾಗಿ ಮೀಸಲಿಡಲಾಗಿದೆ.
ಸಿಂಗ್ ಅವರ ಸ್ಮಾರಕ ನಿರ್ಮಾಣ ಮಾಡಬಹುದಾದಂತ ಸಂಭಾವ್ಯ ಸ್ಥಳಗಳ ಪಟ್ಟಿಯನ್ನು ಗುರುವಾರ ಸಚಿವಾಲಯವು ಅವರ ಕುಟುಂಬಕ್ಕೆ ಹಸ್ತಾಂತರಿಸಿದ್ದು, ಕುಟುಂಬವು ಆಯ್ಕೆ ಮಾಡುವ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಯೋಜಿಸಲಾಗಿದೆ. ಕುಟುಂಬದಿಂದ ಅಂತಿಮ ದೃಢೀಕರಣವನ್ನು ಪಡೆದ ನಂತರ, ಸ್ಮಾರಕದ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುವ ಟ್ರಸ್ಟ್‌ಗೆ ಭೂಮಿಯನ್ನು ಹಂಚಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಇಂದು, ಸಚಿವಾಲಯದಲ್ಲಿ ಸಭೆ ನಡೆಸಲಾಯಿತು. ಮಾಜಿ ಪ್ರಧಾನಿ ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕಾಗಿ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಎರಡು ಸ್ಥಳಗಳನ್ನು ಗುರುತಿಸಲಾಗಿದೆ. ಲಭ್ಯವಿರುವ ಆಯ್ಕೆಗಳ ಬಗ್ಗೆ ಅವರ ಕುಟುಂಬಕ್ಕೂ ತಿಳಿಸಲಾಗಿದೆ. ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿ ಕುಟುಂಬವು ತಮ್ಮ ನಿರ್ಧಾರವನ್ನು ಸಚಿವಾಲಯಕ್ಕೆ ತಿಳಿಸುತ್ತದೆ. ನಂತರ ಭೂಮಿಯನ್ನು ಹಂಚಿಕೆ ಮಾಡಲಾಗುವುದು. ಈ ಪ್ರಕ್ರಿಯೆಯು ಒಂದು ಅಥವಾ ಎರಡು ವಾರಗಳನ್ನು ತೆಗೆದುಕೊಳ್ಳುತ್ತದೆ' ಎಂದು ಅಧಿಕಾರಿಗಳು ಹೇಳಿದರು.
ಟ್ರಸ್ಟ್‌ನ ಸ್ಥಾಪನೆಯನ್ನು ನಿರ್ಧರಿಸುವುದು ಮಾಜಿ ಪ್ರಧಾನಿಯವರ ಕುಟುಂಬದ ಜವಾಬ್ದಾರಿಯಾಗಿದ್ದು, ಟ್ರಸ್ಟಿಗಳ ಸಂಖ್ಯೆಗಳು ಮತ್ತು ಹೆಸರುಗಳನ್ನು ಕುಟುಂಬದ ಸದಸ್ಯರು ನಿರ್ಧರಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಸುಮಾರು ಒಂದು ವಾರದ ನಂತರ ಈ ನಿರ್ಧಾರ ಬಂದಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾಂಗ್ರೆಸ್ ಹಿರಿಯ ನಾಯಕ ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರಕ್ಕೆ ಅಧಿಕೃತ ಸ್ಥಳವನ್ನು ಒದಗಿಸಲು ವಿಫಲವಾದ ಕಾರಣ ವಿರೋಧ ಪಕ್ಷದ ನಾಯಕರ ಟೀಕೆಗೆ ಗುರಿಯಾಗಿದೆ. ಸಿಂಗ್ ಅವರು ಡಿಸೆಂಬರ್ 26 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅದಾದ ಮೂರು ದಿನಗಳ ನಂತರ ಅವರ ಅಂತ್ಯಕ್ರಿಯೆಯು ರಾಷ್ಟ್ರ ರಾಜಧಾನಿಯ ನಿಗಮಬೋಧ್ ಘಾಟ್‌ನಲ್ಲಿ ನಡೆಯಿತು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇದು ಸಿಂಗ್ ಮತ್ತು ಅವರ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಮೊದಲ ಸಿಖ್ ಪ್ರಧಾನಿಯನ್ನು ನಿಗಮಬೋಧ್ ಘಾಟ್‌ನಲ್ಲಿ ದಹಿಸಲಾಯಿತು ಮತ್ತು ಅಧಿಕೃತ ಸಮಾಧಿ ಸ್ಥಳದಲ್ಲಿ ಅಲ್ಲ ಎಂದು ದೂರಿದರು.
ಆಮ್ ಆದ್ಮಿ ಪಕ್ಷವು ಬಹುತೇಕ ಎಲ್ಲ ಮಾಜಿ ಪ್ರಧಾನಿಗಳ ಅಂತ್ಯ ಸಂಸ್ಕಾರವನ್ನು ರಾಜ್‌ಘಾಟ್ ಸಂಕೀರ್ಣದಲ್ಲಿ ಮಾಡಲಾಗಿದೆ. ಆದರೆ, ಮನಮೋಹನ್ ಸಿಂಗ್ ಅವರಿಗೆ ಇದನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಿತು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನವಿಯ ಹೊರತಾಗಿಯೂ ಮನಮೋಹನ್ ಸಿಂಗ್ ಅವರ ಅಂತ್ಯ ಸಂಸ್ಕಾರ ನಡೆಸಲು ಸ್ಥಳವನ್ನು ತಕ್ಷಣವೇ ನೀಡಲು ಕೇಂದ್ರ ನಿರಾಕರಿಸಿತು. ಬಳಿಕ ಸ್ಮಾರಕಕ್ಕೆ ಜಾಗ ಮಂಜೂರು ಮಾಡುವುದಾಗಿ ಸರ್ಕಾರ ಹೇಳಿತ್ತು.
Advertisement