ಉದಯಪುರದಲ್ಲಿ ಭೀಕರ ಅಪಘಾತ: ಟೆಂಪೋಗೆ ಟ್ರಕ್ ಡಿಕ್ಕಿ; ಐವರು ಸಾವು, 8 ಮಂದಿಗೆ ಗಾಯ
ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಶುಕ್ರವಾರ ಟ್ರಕ್‌ವೊಂದು ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಹಿಳೆಯರು ಮತ್ತು ಮಗು ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋಗುಂಡಾ-ಪಿಂಡ್ವಾರಾ ಬಳಿಯ ರಾಷ್ಟ್ರೀಯ ಹೆದ್ದಾರಿ 27ರಲ್ಲಿ ಅಪಘಾತ ಸಂಭವಿಸಿದೆ.
ಟೆಂಪೋ ಸಲೇರಿಯಾ ಗ್ರಾಮದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೆದ್ದಾರಿ ಪ್ರವೇಶಿಸಿದಾಗ ಟ್ರಕ್ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಉದಯಪುರ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಗೋಯಲ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಇಳಿಜಾರಿನಲ್ಲಿ ಟ್ರಕ್ ಚಾಲಕನ ನಿಯಂತ್ರಣ ಕಳೆದುಕೊಂಡು ಟೆಂಪೋಗೆ ಡಿಕ್ಕಿ ಹೊಡೆದಿದೆ. ಟೆಂಪೋದಲ್ಲಿ 13 ಮಂದಿ ಪ್ರಯಾಣಿಕರಿದ್ದು, ಅದರಲ್ಲಿ ನಾಲ್ವರು ಮಹಿಳೆಯರಾದ ಪುಷ್ಪಾ ಗರಸಿಯಾ (40), ಮಂಜುಬಾಯಿ ಗರಸಿಯಾ (25), ಕಸ್ತುಬಾಯಿ ಗರಸಿಯಾ (45) ಮತ್ತು ಮಮತಾ ಗರಸಿಯಾ (22) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಮತಾ ಅವರ ಮಗ ತುಮಾರಾಮ್ (2) ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಗಾಯಗೊಂಡ ಎಂಟು ಜನರನ್ನು ಉದಯಪುರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ