80 ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ ಮನೆಗೆ ಕಳುಹಿಸಿದ ಪ್ರಾಂಶುಪಾಲ; ಕಾರಣ ಕ್ಷುಲ್ಲಕ!
ರಾಂಚಿ: ಖಾಸಗಿ ಶಾಲೆಯೊಂದರ ಪ್ರಾಂಶುಪಾಲರೊಬ್ಬರು 80 ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ ಮನೆಗೆ ಕಳುಹಿಸಿದ ಘಟನೆ ವರದಿಯಾಗಿದೆ.
ಜಾರ್ಖಂಡ್ ನ ಧನ್ಬಾದ್ ಜಿಲ್ಲೆಯ ಜೋರಾಪೋಖರ್ ಪೊಲೀಸ್ ಠಾಣೆ ವ್ಯಾಪ್ತಿಯ ಡಿಗ್ವಾಡಿಹದಲ್ಲಿರುವ ಪ್ರತಿಷ್ಠಿತ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಇದೀಗ ಪ್ರಾಂಶುಪಾಲರ ವಿರುದ್ಧ ದಾರು ದಾಖಲಾಗಿದೆ.
ಮೂಲಗಳ ಪ್ರಕಾರ 10ನೇ ತರಗತಿ ವಿದ್ಯಾರ್ಥಿನಿಯರು ಪರಸ್ಪರರ ಅಂಗಿಗಳ ಮೇಲೆ ಸಂದೇಶಗಳನ್ನು ಬರೆದುಕೊಂಡಿದ್ದರು. ಇದನ್ನು ಗಮನಿಸಿದ ಪ್ರತಿಷ್ಠಿತ ಖಾಸಗಿ ಶಾಲೆಯ ಪ್ರಾಂಶುಪಾಲರು ವಿದ್ಯಾರ್ಥಿನಿಯರ ನಡೆಗೆ ಆಕ್ರೋಶಗೊಂಡು ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ ಕೇವಲ ಬ್ಲೇಜರ್ ಧರಿಸಿ ಮನೆಗೆ ಹೋಗುವಂತೆ ಹೇಳಿದ್ದಾರೆ.
ಈ ಕುರಿತು ವಿದ್ಯಾರ್ಥಿನಿಯರ ಪಾಲಕರು ದೂರು ನೀಡಿದ್ದು, ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಮಾಧವಿ ಮಿಶ್ರಾ ಆದೇಶಿಸಿದ್ದಾರೆ.
ಏನಿದು ಪ್ರಕರಣ?
ವಿದ್ಯಾರ್ಥಿನಿಯರು ನೀಡಿರುವ ಮಾಹಿತಿಯಂತೆ ಶುಕ್ರವಾರ ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿನಿಯರು ‘ಪೆನ್ ಡೇ’ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದರ ಭಾಗವಾಗಿ ಪರಸ್ಪರರ ಅಂಗಿಗಳ ಮೇಲೆ ಸಂದೇಶಗಳನ್ನು ಬರೆದಿದ್ದರು. ಈ ವಿಚಾರ ತಿಳಿದು ಗರಂ ಪ್ರಾಂಶಪಾಲ 10ನೇ ತರಗತಿ ವಿದ್ಯಾರ್ಥಿನಿಯರಿಗೆ ಯೂನಿಫಾರ್ಮ್ನ ಶರ್ಟ್ ತೆಗೆಯುವಂತೆ ಹೇಳಿ ಕೇವಲ ಬ್ಲೇಜರ್ ಧರಿಸಿ ಮನೆಗೆ ಹೋಗುವಂತಹ ದಂಡನೆ ನೀಡಿದ್ದಾರೆ.
ಪೆನ್ ಡೇ ವೇಳೆ ಆಚರಣೆ ಕೆಲವು ಚಟುವಟಿಕೆಗಳ ಬಗ್ಗೆ ಪ್ರಾಂಶುಪಾಲರು ಆಕ್ಷೇಪ ವ್ಯಕ್ತಪಡಿಸಿದ್ದರು, ಆಚರಣೆ ಬಳಿಕ ವಿದ್ಯಾರ್ಥಿನಿಯರನ್ನು ಕರೆದು ಅವರಿಗೆ ಶರ್ಟ್ ಬಿಚ್ಚಿ ಕೇವಲ ಬ್ಲೇಜರ್ ಧರಿಸುವಂತೆ ಹೇಳಲಾಯಿತು. ಅದೇ ಸ್ಥಿತಿಯಲ್ಲಿ ಮನೆಗೆ ಕಳುಹಿಸಲಾಯಿತು. ಪ್ರಾಂಶುಪಾಲರ ಈ ನಡೆಗೆ ಪೋಷಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಘಟನೆ ಪೋಷಕರ ಆಕ್ರೋಶಕ್ಕೆ ಕಾರಣವಾಗಿದ್ದು, ಅನೇಕರು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸ್ಥಳೀಯ ಶಾಸಕಿ ರಾಗಿಣಿ ಸಿಂಗ್ ಕೂಡ ಪೋಷಕರ ಜೊತೆಗಿದ್ದು, ಘಟನೆ ದುರದೃಷ್ಟಕರ ಮತ್ತು ನಾಚಿಕೆಗೇಡಿನ ಸಂಗತಿ ಎಂದಿದ್ದು, ಘಟನೆಯ ತನಿಖೆಗಾಗಿ ಸಮಿತಿಯನ್ನು ರಚಿಸುವುದಾಗಿ ಅವರು ಘೋಷಿಸಿದರು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಭರವಸೆ ನೀಡಿದರು. ಈ ಪ್ರಕರಣದಲ್ಲಿ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಆಡಳಿತವು ಬದ್ಧವಾಗಿದೆ ಎಂದು ರಾಗಿಣಿ ಸಿಂಗ್ ಹೇಳಿದ್ದಾರೆ.

