
ಪ್ರಯಾಗ್ ರಾಜ್: 12 ವರ್ಷಗಳಿಗೊಮ್ಮೆ ಪ್ರಯಾಗ್ ರಾಜ್ ನಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ಇಂದು ಅದ್ಧೂರಿ ಚಾಲನೆ ದೊರೆತಿದ್ದು, ಜಗತ್ತಿನ ಈ ಅತೀ ದೊಡ್ಡ ಧಾರ್ಮಿಕ ಪವಿತ್ರ ಕಾರ್ಯಕ್ರಮದ ಕುರಿತ ಪ್ರಮುಖ ಮಾಹಿತಿ ಇಲ್ಲಿದೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಗಂಗಾನದಿ ತಟದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳವು ಇಂದಿನಿಂದ ಆರಂಭವಾಗಿದ್ದು, ಸಾಧು–ಸಂತರು ಸೇರಿ ಬರೊಬ್ಬರಿ 45 ಕೋಟಿಯಷ್ಟು ಭಕ್ತರ ಮಹಾಪೂರವೇ ಇಲ್ಲಿಗೆ ಹರಿದು ಬರುತ್ತಿದೆ. ಜನವರಿ 13ರಿಂದ ಫೆಬ್ರವರಿ ಫೆಬ್ರುವರಿ 26ರವರೆಗೆ 45 ದಿನ ನಡೆಯುವ ಮೇಳದಲ್ಲಿ ದೇಶ–ವಿದೇಶಗಳಿಂದ ಭಕ್ತರು ಭಾಗವಹಿಸಲಿದ್ದಾರೆ.
12 ವರ್ಷಕ್ಕೆ ಒಂದು ಬಾರಿ
ಮಹಾಕುಂಭ ಮೇಳವು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಕಳೆದ ಬಾರಿ 2013ರಲ್ಲಿ ಪ್ರಯಾಗ್‌ರಾಜ್‌ನಲ್ಲಿಯೇ ಮಹಾಕುಂಭ ಮೇಳ ನಡೆದಿತ್ತು. ಪ್ರಯಾಗ್‌ರಾಜ್ ಸೇರಿದಂತೆ ದೇಶದ ಪ್ರಮುಖ ನಾಲ್ಕು ಧಾರ್ಮಿಕ ಸ್ಥಳಗಳಲ್ಲಿ ಮೂರು ವರ್ಷಗಳಿಗೊಮ್ಮೆ ಸರದಿಯಲ್ಲಿ ಕುಂಭಮೇಳ ನಡೆಯುತ್ತದೆ.
ಉತ್ತರಾಖಂಡದ ಹರಿದ್ವಾರದ ಗಂಗಾ ನದಿ ತೀರದಲ್ಲಿ, ಮಧ್ಯಪ್ರದೇಶದ ಉಜ್ಜಯಿನಿಯ ಶಿಪ್ರಾ ನದಿ ತೀರದಲ್ಲಿ, ಮಹಾರಾಷ್ಟ್ರದ ನಾಸಿಕ್‌ನಲ್ಲಿ ಗೋದಾವರಿ ನದಿ ತೀರದಲ್ಲಿ ಮತ್ತು ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ (ಯಮುನೆ, ಗಂಗಾ ಮತ್ತು ಗುಪ್ತಗಾಮಿನಿಯಾಗಿ ಹರಿಯುವ ಸರಸ್ವತಿ ನದಿಗಳು ಕೂಡುವ ಪ್ರದೇಶ) ಕುಂಭ ಮೇಳ ನಡೆಯುತ್ತದೆ.
ಕುಂಭಮೇಳದ ಐತಿಹ್ಯ
ಈ ನಾಲ್ಕು ಪ್ರದೇಶಗಳಲ್ಲೇ ಯಾಕೆ ಕುಂಭಮೇಳ ನಡೆಯುತ್ತದೆ ಎನ್ನುವುದಕ್ಕೆ ಪುರಾಣದ ಕಥೆಯೊಂದಿದೆ. ಸಮುದ್ರ ಮಥನದ ವೇಳೆ ಬಂದ ಅಮೃತ ಕಲಶವನ್ನು ವಿಷ್ಣುವು ಮೋಹಿನಿಯ ರೂಪದಲ್ಲಿ ಹೊತ್ತುಕೊಂಡು ಹೋಗುವಾಗ ಸಂಭವಿಸಿದ ಘರ್ಷಣೆಯಲ್ಲಿ ಅಮೃತದ ನಾಲ್ಕು ಹನಿಗಳು ಪ್ರಯಾಗ, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಗಳಲ್ಲಿರುವ ತೀರ್ಥದಲ್ಲಿ ಬಿದ್ದವು. ಈ ನಾಲ್ಕು ತೀರ್ಥಗಳು ಪವಿತ್ರವಾಗಿದ್ದು, ಇಲ್ಲಿ ಪವಿತ್ರ ಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಹಿಂದೂಗಳ ನಂಬಿಕೆ. ಆರು ವರ್ಷಗಳಿಗೊಮ್ಮೆ ಅರ್ಧ ಕುಂಭಮೇಳ ನಡೆಯುತ್ತದೆ. 2019ರಲ್ಲಿ ಪ್ರಯಾಗ್‌ರಾಜ್‌ನಲ್ಲೇ ಅರ್ಧ ಕುಂಭಮೇಳ ನಡೆದಿತ್ತು. ಹಿಂದೂ ಕ್ಯಾಲೆಂಡರ್ ಅನುಸಾರ ಸೂರ್ಯ, ಚಂದ್ರ ಮತ್ತು ಗುರುಗ್ರಹದ ಚಲನೆಯನ್ನು ಆಧರಿಸಿ ಕುಂಭಮೇಳ ನಡೆಯುವ ಸ್ಥಳ, ದಿನಾಂಕವನ್ನು ನಿಗದಿಪಡಿಸಲಾಗುತ್ತದೆ.
ಇತಿಹಾಸ
ಪೌರಾಣಿಕ ಹಿನ್ನೆಲೆ ಹೊರತಾಗಿ, ಕ್ರಿ.ಪೂ 4ನೇ ಶತಮಾನದಲ್ಲಿ ಮೌರ್ಯ, ಗುಪ್ತರ ಆಡಳಿತದಲ್ಲಿ ಕುಂಭ ಮೇಳ ನಡೆದಿರುವ ಬಗ್ಗೆ ದಾಖಲೆಗಳಿವೆ ಎಂದು ಹೇಳುತ್ತದೆ ಉತ್ತರ ಪ್ರದೇಶ ಸರ್ಕಾರ ರೂಪಿಸಿರುವ ಕುಂಭ ಮೇಳಕ್ಕೆ ಸಂಬಂಧಿಸಿದ ವೆಬ್‌ಸೈಟ್. ನಂತರ ಬಂದ ರಾಜರು ಕೂಡ ಕುಂಭ ಮೇಳಕ್ಕೆ ಪ್ರೋತ್ಸಾಹ ನೀಡುತ್ತಾ ಬಂದರು. ಮೊಘಲರ ಆಡಳಿತದಲ್ಲೂ ಕುಂಭ ಮೇಳ ನಡೆಯುತ್ತಿತ್ತು. ಅಕ್ಬರ್ ಸಕ್ರಿಯವಾಗಿ ಇದರಲ್ಲಿ ತೊಡಗಿಸಿಕೊಳ್ಳುತ್ತಿದ್ದ ಎಂಬುದಕ್ಕೆ ಇತಿಹಾಸದಲ್ಲಿ ದಾಖಲೆಗಳಿವೆ. ಬ್ರಿಟಿಷ್ ಆಡಳಿತ ಕೂಡ ಈ ಉತ್ಸವಕ್ಕೆ ಪ್ರೋತ್ಸಾಹ ನೀಡಿತ್ತು.
ಎಂಟನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಕುಂಭ ಮೇಳದಲ್ಲಿ ಹೆಚ್ಚೆಚ್ಚು ಸಾಧು ಸಂತರು ಒಟ್ಟಾಗಿ ಪಾಲ್ಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು ಎಂದೂ ಹೇಳಲಾಗುತ್ತಿದೆ. 1947ರಲ್ಲಿ ಸ್ವಾತಂತ್ರ್ಯ ಬಂದ ನಂತರ, ಸರ್ಕಾರವೇ ಕುಂಭ ಮೇಳವನ್ನು ಆಯೋಜಿಸುತ್ತಿದೆ. ಕುಂಭ ಮೇಳದಲ್ಲಿ ಸಾಧು ಸಂತರ 13 ಆಖಾಡಾಗಳು (ಗುಂಪು) ಸಕ್ರಿಯವಾಗಿ ಭಾಗವಹಿಸುತ್ತವೆ. ನಾಗಾ–ಸಾಧುಗಳು, ಅಘೋರಿಗಳು ಸೇರಿದಂತೆ ದೇಶದಾದ್ಯಂತ ವಿವಿಧ ರಾಜ್ಯಗಳ ಸಾಧು ಸಂತರು ಈ ಕುಂಭಮೇಳದಲ್ಲಿ ಭಾಗವಹಿಸುವುದು ವಿಶೇಷ.
Advertisement