
ಪ್ರಯಾಗ್ ರಾಜ್ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಆವರಣದ ದಾಸ್ನಾ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಗಿರಿ ಶಿಬಿರದ ಬಳಿ ಮುಸ್ಲಿಂ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಓಡಾಡುತ್ತಿದದ್ದು ಕಂಡುಬಂದಿದೆ. ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಮುಸ್ಲಿಂ ವ್ಯಕ್ತಿ ತಮ್ಮ ಶಿಬಿರದ ಹೊರಗೆ ಕಾಣಿಸಿಕೊಂಡರು. ಅಲ್ಲಿದ್ದವರು ಆತನನ್ನು ಪ್ರಶ್ನಿಸಿದಾಗ ತನ್ನ ಹೆಸರು ಅಯುಬ್ ಎಂದು ಬಾಯ್ಬಿಟ್ಟಿದ್ದಾನೆ. ಬಳಿಕ ಶಿಬಿರದ ಸ್ವಯಂ ಸೇವಕರು ಆತನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
ಯತಿಗಳಿಗೆ ಭದ್ರತೆ ಹೆಚ್ಚಿಸುವಂತೆ ಪೊಲೀಸರಿಗೆ ಮನವಿ ಮಾಡಿರುವುದಾಗಿ ಯತಿ ನರಸಿಂಹಾನಂದ ಸರಸ್ವತಿ ಟ್ರಸ್ಟ್ ಖಜಾಂಚಿ ಉದಿತಾ ತ್ಯಾಗಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪ್ರವಾದಿ ಮಹಮ್ಮದ್ ವಿರುದ್ಧ ಹೇಳಿಕೆಗಾಗಿ ಹಲವು ದ್ವೇಷಪೂರಿತ ಭಾಷಣ ಕೇಸ್ ಗಳು ದಾಖಲಾಗಿರುವ ನರಸಿಂಹಾನಂದ ಅವರು, ಕುಂಭಮೇಳ ಆವರಣದ ಸಂಗಮ್ ಲೋವರ್ ಮಾರ್ಗ್ ಪ್ರದೇಶದ ಶಾಸ್ತ್ರಿ ಸೇತುವೆಯ ಕೆಳಗೆ ಇರುವ ದುದೇಶ್ವರನಾಥ ಮಹಾದೇವ್ ಶಿಬಿರದಲ್ಲಿ ತಂಗಿದ್ದಾರೆ.
ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಟಿ) ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ವ್ಯಕ್ತಿಯನ್ನು ವಿಚಾರಣೆ ನಡೆಸಿದೆ ಎಂದು ಅಖಾರಾ ಪೊಲೀಸ್ ಠಾಣೆ ಎಸ್‌ಎಚ್‌ಒ ಭಾಸ್ಕರ್ ಮಿಶ್ರಾ ಹೇಳಿದ್ದಾರೆ.
ವ್ಯಕ್ತಿಯನ್ನು ಅಯೂಬ್ ಎಂದು ಗುರುತಿಸಲಾಗಿದ್ದು, ಇಟಾಹ್ ಮೂಲದವರು. ಕುತೂಹಲದಿಂದ ಅಥವಾ ಆಹಾರದ ಹುಡುಕಾಟದಲ್ಲಿ ಆತ ಇಲ್ಲಿ ಇದ್ದಂತೆ ತೋರುತ್ತದೆ. ಅವರಿಂದ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಈ ವಿಚಾರದಲ್ಲಿ ತನಿಖೆ ನಡೆಯುತ್ತಿದೆ ಎಂದು ಮಿಶ್ರಾ ತಿಳಿಸಿದರು.
Advertisement