ವಾರಕ್ಕೆ 90 ಗಂಟೆ ಕೆಲಸ: L&T ಸಂಸ್ಥೆಗೆ ಧನ್ಯವಾದ ಹೇಳುತ್ತೇನೆ, ಆದರೆ...; ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ

ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಬಿಆರ್ ಅಂಬೇಡ್ಕರ್ ಅವರು ಕಾರ್ಮಿಕರು ದಿನದಲ್ಲಿ ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಬಾರದು ಎಂದು ಪ್ರತಿಪಾದಿಸಿದ್ದರು ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Updated on

ನವದೆಹಲಿ: L&T ಚೇರ್ಮನ್ ಎಸ್ಎನ್ ಸುಬ್ರಹ್ಮಣ್ಯನ್ ಅವರು ನೌಕರರು ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕೆನ್ನುವ ಹೇಳಿಕೆಗೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಬುಧವಾರ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಬಿಆರ್ ಅಂಬೇಡ್ಕರ್ ಅವರು ಕಾರ್ಮಿಕರು ದಿನದಲ್ಲಿ ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಬಾರದು ಎಂದು ಪ್ರತಿಪಾದಿಸಿದ್ದರು ಎಂದಿದ್ದಾರೆ.

ಇಲ್ಲಿನ ಕೋಟ್ಲಾ ರಸ್ತೆಯ 9ಎಯಲ್ಲಿ ನಿರ್ಮಿಸಲಾಗಿರುವ ಕಾಂಗ್ರೆಸ್‌ನ ನೂತನ ಕೇಂದ್ರ ಕಚೇರಿಯನ್ನು ಉದ್ಘಾಟಿಸಿದ ನಂತರ ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ನೂತನ ಪಕ್ಷದ ಪ್ರಧಾನ ಕಚೇರಿಯನ್ನು ನಿರ್ಮಿಸುವಲ್ಲಿ L&T ಕನ್‌ಸ್ಟ್ರಕ್ಷನ್‌ ಮಾಡಿರುವ ಕಾರ್ಯವನ್ನು ಶ್ಲಾಘಿಸಿದರು.

'L&T ಸಂಸ್ಥೆಯು ಈ ಕಚೇರಿಯ ನಿರ್ಮಾಣ ಮಾಡಿರುವುದಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. L&T ಕನ್‌ಸ್ಟ್ರಕ್ಷನ್, ಆರ್ಕಿಟೆಕ್ಟ್‌ಗಳು, ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದ ಕಾರ್ಮಿಕರಿಗೆ ಧನ್ಯವಾದ ಹೇಳುತ್ತೇನೆ. ಆದರೆ, ಕಂಪನಿಯ ಚೇರ್ಮನ್ ಮಾಡಿರುವ ವಾರದಲ್ಲಿ 90 ಗಂಟೆಗಳ ಕಾಲ ಕೆಲಸ ಮಾಡುವ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ' ಎಂದು ಹೇಳಿದರು.

ಒಬ್ಬ ಕಾರ್ಮಿಕ ಎಂಟು ಗಂಟೆ ಕೆಲಸ ಮಾಡಿ ಸುಸ್ತಾಗುತ್ತಾನೆ. ಅದಕ್ಕಾಗಿಯೇ ನೆಹರು ಮತ್ತು ಅಂಬೇಡ್ಕರ್ ಅವರು ಕಾರ್ಖಾನೆ ಕಾಯಿದೆ ಮಾಡುವಾಗ ಕಾರ್ಮಿಕರಿಂದ ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿಸಬಾರದು ಎಂದು ಹೇಳಿದ್ದರು. 'ನಂತರ ಯಾರೋ 9 ಗಂಟೆ ಕೆಲಸ ಮಾಡಬೇಕೆಂದರು. ಆದರೆ, ಇದೀಗ ಎಲ್ & ಟಿ ಮುಖ್ಯಸ್ಥರು ನೌಕರರು 12 ಗಂಟೆ, 14 ಗಂಟೆ ಕೆಲಸ ಮಾಡಬೇಕೆಂದು ಮಾತನಾಡುತ್ತಿದ್ದಾರೆ. ಅವರು ಈ ದೃಷ್ಟಿಕೋನವನ್ನು ತಮ್ಮ ತಲೆಯಿಂದ ತೆಗೆದುಹಾಕಬೇಕು. ಆದರೆ, ನಾನು ಕಂಪನಿಗೆ ಧನ್ಯವಾದ ಹೇಳುತ್ತೇನೆ. ಏಕೆಂದರೆ, ಅವರು ಉತ್ತಮ ಕೆಲಸ ಮಾಡಿದ್ದಾರೆ. ಕಾರ್ಮಿಕರ ಶ್ರಮಕ್ಕೆ ಧನ್ಯವಾದ ಅರ್ಪಿಸುತ್ತೇನೆ' ಎಂದು ಖರ್ಗೆ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ
New Delhi: ಕೋಟ್ಲಾ ರಸ್ತೆಯಲ್ಲಿ ಕಾಂಗ್ರೆಸ್ ನೂತನ ಪ್ರಧಾನ ಕಚೇರಿ ಉದ್ಘಾಟನೆ

ಪಕ್ಷದ ಹೊಸ ಪ್ರಧಾನ ಕಛೇರಿಯ ನಿರ್ಮಾಣ ಮತ್ತು ಪೂರ್ಣಗೊಳಿಸುವಿಕೆಯ ಕೆಲಸವನ್ನು ಮೇಲ್ವಿಚಾರಣೆ ಮಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಕಾಂಗ್ರೆಸ್ ಅಧ್ಯಕ್ಷರು ಧನ್ಯವಾದ ಅರ್ಪಿಸಿದರು.

ಎಲ್&ಟಿ ಅಧ್ಯಕ್ಷ ಎಸ್‌ಎನ್ ಸುಬ್ರಹ್ಮಣ್ಯನ್ ಅವರು ಇತ್ತೀಚೆಗಷ್ಟೇ, ಸ್ಪರ್ಧಾತ್ಮಕವಾಗಿ ಉಳಿಯಲು ನೌಕರರು ಭಾನುವಾರದಂದು ಸಹ ಕೆಲಸ ಮಾಡಬೇಕು. ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು. ಭಾನುವಾರಗಳಂದು ನಿಮ್ಮನ್ನು ಕೆಲಸಕ್ಕೆ ತೊಡಗಿಸದಿರುವುದಕ್ಕೆ ವಿಷಾದವಿದೆ. ಭಾನುವಾರದಂದೂ ನೀವು ಕೆಲಸ ಮಾಡುವಂತಾದರೆ ಅದು ನನಗೆ ಹೆಚ್ಚಿನ ಖುಷಿ ಕೊಡುತ್ತದೆ. ಏಕೆಂದರೆ ನಾನೂ ಕೂಡ ಭಾನುವಾರಗಳಂದು ಕೆಲಸ ಮಾಡುತ್ತೇನೆ. ಭಾನುವಾರ ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ಎಷ್ಟು ಸಮಯ ನಿಮ್ಮ ಹೆಂಡತಿಯನ್ನೇ ನೋಡುತ್ತಾ ಕುಳಿತಿರುತ್ತೀರಿ? ಹೆಂಡತಿಯರೂ ಅಷ್ಟೇ ಎಷ್ಟು ಅಂತ ಗಂಡನ ಮುಖ ನೋಡುತ್ತಾ ಕುಳಿತಿರಲು ಸಾಧ್ಯ? ಅದರ ಬದಲು ಕಚೇರಿಗೆ ಬಂದು ಕೆಲಸ ಮಾಡಿ ಎಂದು ನೌಕರರಿಗೆ ಕರೆ ನೀಡಿದ್ದರು.

ಸುಬ್ರಹ್ಮಣ್ಯನ್ ಅವರ ಹೇಳಿಕೆಗಳು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. RPG ಗ್ರೂಪ್ ಚೇರ್ಮನ್ ಹರ್ಷ್ ಗೋಯೆಂಕಾ, ಭಾರತದ ಮಾಜಿ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಧಾರ್ ಪೂನಾವಾಲಾ ಮತ್ತು ಖ್ಯಾತ ಉದ್ಯಮಿ ಆನಂದ್ ಮಹಿಂದ್ರ ಸೇರಿದಂತೆ ಹಲವರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು.

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಕೂಡ ಈ ಹಿಂದೆ ನೌಕರರು ವಾರಕ್ಕೆ 70 ಗಂಟೆಗಳು ಕೆಲಸ ಮಾಡಬೇಕು ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com