
ಭೀಮವರಂ: ಸಂಕ್ರಾಂತಿ ಹಬ್ಬದ ನಿಮಿತ್ತ ಆಂಧ್ರ ಪ್ರದೇಶದ ಭೀಮವರಂ ಜಿಲ್ಲೆಯಲ್ಲಿ ನಡೆದ ಕೋಳಿ ಕಾಳಗದಲ್ಲಿ ಹುಂಜವೊಂದು ಅಚ್ಚರಿ ರೀತಿಯಲ್ಲಿ ಏನೂ ಮಾಡದೇ ಪಂದ್ಯ ಗೆದ್ದಿದೆ.
ಹೌದು.. ಸಾಮಾನ್ಯವಾಗಿ ಸ್ಪರ್ಧೆ ಎಂದರೆ ಇಬ್ಬರು ವ್ಯಕ್ತಿಗಳು ಪರಸ್ಪರ ಸೆಣಸಬೇಕು... ಅದು ಮನುಷ್ಯರ ನಡುವೆ ಇರಲಿ.. ಪ್ರಾಣಿಗಳ ನಡುವೆ ಇರಲಿ.. ಅಥವಾ ಅಂತಿಮವಾಗಿ ಪಕ್ಷಿಗಳ ನಡುವೆಯೇ ಇರಲಿ. ಇಲ್ಲೊಂದು ವಿಚಿತ್ರ ಕೋಳಿ ಕಾಳಗದಲ್ಲಿ ಕೋಳಿಯೊಂದು ಯಾವುದೇ ಕೋಳಿಗಳೊಂದಿಗೆ ಸೆಣಸದೇ ಇದ್ದರೂ ಜಯಶಾಲಿಯಾಗಿದೆ.
ಅಚ್ಚರಿಯಾದರೂ ಇದು ಸತ್ಯ.. ಆಂಧ್ರ ಪ್ರದೇಶದ ಭೀಮವರಂ ಜಿಲ್ಲೆಯಲ್ಲಿ ನಡೆದ ಕೋಳಿ ಸ್ಪರ್ಧೆಯಲ್ಲಿ ಅದೃಷ್ಟಶಾಲಿ ಕೋಳಿಯೊಂದು ಯಾವುದೇ ಸ್ಪರ್ಧೆ ಇಲ್ಲದೇ ಪಂದ್ಯ ಜಯಿಸಿದೆ.
ಈ ವಿಶೇಷ ಪಂದ್ಯದಲ್ಲಿ ಒಟ್ಟು ಐದು ಕೋಳಿಗಳು ಏಕಕಾಲಕ್ಕೆ ಕಾಳಗಕ್ಕೆ ಇಳಿದಿದ್ದವು. ಒಂದು ದೊಡ್ಡ ವೃತ್ತ ಬರೆದು ಅದರೊಳಗೆ ಐದು ಕೋಳಿಗಳನ್ನು ಏಕಕಾಲದಲ್ಲಿ ಕಾಳಗಕ್ಕೆ ಬಿಡಲಾಗಿತ್ತು. ಈ ಪೈಕಿ 4 ಕೋಳಿಗಳು ಪರಸ್ಪರ ಕಾದಾಡಿವೆ. ಒಂದಾದ ಬಳಿಕ ಒಂದು ಪ್ರಾಣ ಬಿಟ್ಟಿದ್ದು, ಮತ್ತೊಂದು ಬದಿಯಲ್ಲಿ ಏನೂ ಮಾಡದೇ ನಿಂತಿದ್ದ ಕೋಳಿ ಈ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
ಮೊದಲಿಗೆ ಎರಡು ಕೋಳಿಗಳು ಜಗಳವಾಡಿದವು, ಆದರೆ ಒಂದು ಗೆದ್ದಿತು. ನಂತರ, ಇನ್ನೂ ಎರಡು ಕೋಳಿಗಳು ಸ್ಪರ್ಧಿಸಿದವು, ಆದರೆ ಒಂದು ಓಡಿಹೋಯಿತು. ಇನ್ನು ಮೂರು ಕೋಳಿಗಳು ಮಾತ್ರ ಉಳಿದವು. ಉಳಿದ ಮೂರು ಕೋಳಿಗಳೂ ಕೂಡ ಪರಸ್ಪರ ಕಾದಾಡಿಕೊಂಡು ಪರಸ್ಪರ ಕತ್ತಿಗೆ ಬಲಿಯಾಗಿವೆ. ಆ ಮೂಲಕ ಅಂತಿಮವಾಗಿ ಏನೂ ಮಾಡದೇ ಮೌನವಾಗಿ ನಿಂತಿದ್ದ ಕೋಳಿ ಈ ಪಂದ್ಯ ಗೆದ್ದಿದೆ.
ಬರೊಬ್ಬರಿ 25 ಲಕ್ಷ ರೂ ಬಹುಮಾನ
ಇನ್ನು ಈ ಪಂದ್ಯದಲ್ಲಿ ಗೆದ್ದ ಕೋಳಿಗೆ ಬರೊಬ್ಬರಿ 25ಲಕ್ಷರೂ ಬಹುಮಾನ ನೀಡಲಾಯಿತು ಎಂದು ಹೇಳಲಾಗಿದೆ. ಇದಲ್ಲದೇ ಈ ಪಂದ್ಯ ನೋಡಲು ಬಂದ ಪ್ರೇಕ್ಷಕರೂ ಕೂಡ ಪರಸ್ಪರ ಬೆಟ್ಟಿಂಗ್ ನಡೆಸಿದ್ದು, ಇದೊಂದು ಪಂದ್ಯವೇ ಸುಮಾರು 3 ಕೋಟಿ ರೂಗಳ ಬೆಟ್ಟಿಂಗ್ ಗೆ ವೇದಿಕೆಯಾಗಿತ್ತು ಎನ್ನಲಾಗಿದೆ.
1.25 ಕೋಟಿ ರೂ ಗೆದ್ದ ಕೋಳಿ
ಮತ್ತೊಂದು ಪಂದ್ಯದಲ್ಲಿ ಇದೇ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೇಪಲ್ಲಿ ಗೂಡಂನಲ್ಲಿ ಮತ್ತೊಂದು ವಿಶೇಷ ಕೋಳಿ ಕಾಳಗ ಪಂದ್ಯ ಆಯೋಜನೆಯಾಗಿತ್ತು. ಈ ಪಂದ್ಯದಲ್ಲಿ ಗುಡಿವಾಡ ಪ್ರಭಾಕರ್ ಅವರ ಕೋಳಿ ರಸಂಗಿ ರತ್ತಯ್ಯ ಅವರ ಕೋಳಿಯನ್ನು ಸೋಲಿಸಿ ಬರೊಬ್ಬರಿ 1.25 ಕೋಟಿ ರೂ ಬಹುಮಾನ ಗೆದ್ದಿತ್ತು.
Advertisement