
ರಾಜಮಂಡ್ರಿ: ಮೊದಲ ಸಂಕ್ರಾಂತಿಗಾಗಿ ಮನೆಗೆ ಬಂದ ಅಳಿಯನಿಗೆ ಅವರ ಮಾವ ಬರೊಬ್ಬರಿ 666 ಖಾದ್ಯ ತಯಾರಿಸಿ ಉಣಬಡಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಆಂಧ್ರ ಪ್ರದೇಶದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಬಹಳ ಮಹತ್ವವಿದೆ. ಹಬ್ಬದ ಆಚರಣೆ ಮಾತ್ರವಲ್ಲದೇ ಹಬ್ಬಕ್ಕಾಗಿ ತಯಾರಿಸುವ ತಿನಿಸುಗಳಿಗೂ ವ್ಯಾಪಕ ಪ್ರಾಮುಖ್ಯತೆ ನೀಡಲಾಗುತ್ತದೆ. ಅದರಲ್ಲೂ ಮೊದಲ ಬಾರಿಗೆ ಮನೆಗೆ ಬರುವ ಅಳಿಯನಿಗೆ ರಾಜಾತಿಥ್ಯ ನೀಡಿ ನೂರಾರು ತಿಂಡಿ ತಿನಿಸುಗಳನ್ನು ತಯಾರಿಸಿ ನೀಡಲಾಗುತ್ತದೆ.
ಅಂತೆಯೇ ಆಂಧ್ರಪ್ರದೇಶದ ಕೊನಸೀಮಾ ಜಿಲ್ಲೆಯ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಗಂಧಮ್ ಹೇಮಂತ್ ಅವರಿಗೆ ಅವರ ಮಾವ ಜಂಗಾ ಬುಜ್ಜಿ ಅವರು ಬರೊಬ್ಬರಿ 666 ಖಾದ್ಯಗಳನ್ನು ತಯಾರಿಸಿ ಆತಿಥ್ಯ ನೀಡಿದ್ದಾರೆ.
ಮೂಲತಃ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಗಂಧಮ್ ಹೇಮಂತ್ ಕಳೆದ ವರ್ಷ ರಾಜಮಂಡ್ರಿಯ ಕೋನಸೀಮೆಯ ಜಂಗಾ ಬುಜ್ಜಿ ಅವರ ಪುತ್ರಿಯನ್ನು ವಿವಾಹವಾಗಿದ್ದರು. ಪ್ರಸ್ತುತ ಹೇಮಂತ್ ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದು, ಸಂಕ್ರಾಂತಿ ಹಬ್ಬದ ನಿಮಿತ್ತ ತಮ್ಮ ಮಾವ ಜಂಗಾ ಬುಜ್ಜಿ ಅವರ ನಿವಾಸಕ್ಕೆ ಆಗಮಿಸಿದ್ದು, ಈ ವೇಳೆ ಅವರಿಗೆ 666 ಖಾದ್ಯಗಳನ್ನು ತಯಾರಿಸಿ ಔತಣ ನೀಡಲಾಗಿದೆ.
ಈ ಎಲ್ಲ 666 ಬಗೆಯ ಖಾದ್ಯಗಳು ಆಂಧ್ರ ಪ್ರದೇಶದ ಪಾರಂಪರಿಕ ಖಾದ್ಯಗಳಾಗಿವೆ. ಇವುಗಳಲ್ಲಿ ಮಾಂಸಾಹಾರ ಮತ್ತು ಸಸ್ಯಾಹಾರ ಖಾದ್ಯಗಳೂ ಸೇರಿದ್ದು, ಆಂಧ್ರ ಪ್ರದೇಶದ ಸಾಂಸ್ಕ್ರತಿಕ ಅಡುಗೆಗಳು, ಬಗೆ ಬಗೆಯ ಉಪ್ಪಿನಕಾಯಿ, ಒಣ ಹಣ್ಣುಗಳು, ಕೊನಸೀಮಾ ವಿಶೇಷ ಆಹಾರ ಪದಾರ್ಥಗಳು, ಹಣ್ಣುಗಳು, ತಂಪು ಪಾನೀಯಗಳು, ಐಸ್ ಕ್ರೀಮ್‌ಗಳು, ಬಿಸ್ಕತ್ತುಗಳು, ನೈಸರ್ಗಿಕ ಪಾನೀಯಗಳು ಮತ್ತು ಗಿಡಮೂಲಿಕೆ ಪಾನೀಯಗಳು, ಕಬ್ಬಿನಂತಹ ನೈಸರ್ಗಿಕ ಆಹಾರ ಪದಾರ್ಥಗಳು ಸೇರಿವೆ ಎನ್ನಲಾಗಿದೆ.
ಖಾದ್ಯಗಳು ಮಾತ್ರವಲ್ಲದೇ ಆಂಧ್ರ ಪ್ರದೇಶದ ಪ್ರಮುಖ ದೇಗುಲಗಳಾದ ತಿರುಪತಿ ವೆಂಕಟೇಶ್ವರ ಸ್ವಾಮಿ ದೇಗುಲ, ಶ್ರೀಶೈಲಂ, ಅನ್ನಾವರಂ, ಸಿಂಹಾಚಲಂ, ಅಪ್ಪನಪಲ್ಲಿ ಮತ್ತು ವಿಜಯವಾಡದ ಕನಕದುರ್ಗಾ ದೇವಸ್ಥಾನದಂತಹ ಎಲ್ಲಾ ಪ್ರಮುಖ ದೇವಾಲಯಗಳಿಂದ ಪ್ರಸಾದಗಳನ್ನು ಸಹ ನೀಡಲಾಗಿತ್ತು.
40 ಬಾಣಸಿಗರಿಂದ ಖಾದ್ಯ ತಯಾರಿ
ಈ 666 ಖಾದ್ಯಗಳನ್ನು ತಯಾರಿಸಲು ಬರೊಬ್ಬರಿ 40 ಬಾಣಸಿಗರನ್ನು ನೇಮಿಸಲಾಗಿತ್ತಂತೆ. ಕುಟುಂಬ ಸದಸ್ಯರ ಸಹಾಯದಿಂದ ಸುಮಾರು 40 ಅಡುಗೆಯವರು ಬೆಳಗಿನ ಜಾವ 3 ರಿಂದ ಮಧ್ಯಾಹ್ನ 12 ರವರೆಗೆ ಊಟ ಸಿದ್ಧಪಡಿಸಿದ್ದಾರೆ.
ಅಳಿಯನ ಮೊದಲ ಭೇಟಿ ಸ್ಮರಣೀಯವಾಗಿಸಲು ವಿಶೇಷ ಖಾದ್ಯಗಳು
ಇನ್ನು ತನ್ನ ಮಗಳನ್ನು ಮದುವೆಯಾದ ನಂತರ ಮೊದಲ ಸಂಕ್ರಾಂತಿಗೆ ತಮ್ಮ ಅಳಿಯ ಮನೆಗೆ ಆಗಮಿಸುತ್ತಿದ್ದು, ಆತನ ಮೊದಲ ಭೇಟಿಯನ್ನು ಸ್ಮರಣೀಯ ಸಂದರ್ಭವನ್ನಾಗಿ ಮಾಡಲು ಬಯಸಿದ್ದಾಗಿ ಮಾವ ಜಂಗ ಬುಜ್ಜಿ ಹೇಳಿದ್ದಾರೆ. 'ವರ್ಷದ 365 ದಿನಗಳನ್ನು ಹೋಲುವ 365 ವಿಧದ ಖಾದ್ಯಗಳನ್ನು ಮೊದಲು ಬಡಿಸಲು ಬಯಸಿದ್ದೆವು. ಆದರೆ ನಂತರ ನಾನು 666 ವಿಧಗಳನ್ನು ಬಡಿಸಲು ನಿರ್ಧರಿಸಿದೆ. ಏಕೆಂದರೆ 666 ಎಂಬುದು ಶುಭ ಸಂಖ್ಯೆಯಾಗಿದೆ ಎಂದು ಹೇಳಿದ್ದಾರೆ.
ಮಾವನ ಪ್ರೀತಿ ನೋಡಿ ಅಳಿಯ ಆನಂದಬಾಷ್ಪ
ಇನ್ನು ತಮ್ಮ ಮಾವನ ಆತಿಥ್ಯ ಮತ್ತು ಔತಣಕೂಟ ನೋಡಿ ಅವರ ಅಳಿಯ ಹೇಮತ್ ತನ್ನ ಭಾವನೆಗಳನ್ನು ಮರೆಮಾಡಲು ಸಾಧ್ಯವಾಗಲಿಲ್ಲ, ಆತಿಥ್ಯಕ್ಕೆ ಮಾರು ಹೋಗಿ ಹೇಮಂತ್ ಹಲವಾರು ನಿಮಿಷಗಳ ಕಾಲ ಸಂತೋಷದ ಕಣ್ಣೀರು ಸುರಿಸಿದರು ಎಂದು ಬುಜ್ಜಿ ಹೇಳಿದ್ದಾರೆ.
Advertisement