
ನವದೆಹಲಿ: ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಮುಂದುವರೆದಿದ್ದು, ರಷ್ಯಾ ಪರವಾಗಿ ಹೋರಾಡುತ್ತಿರುವ ಒಟ್ಟು 126 ಭಾರತೀಯರ ಪೈಕಿ ಇದುವರೆಗೆ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 16 ಮಂದಿ ನಾಪತ್ತೆಯಾಗಿದ್ದಾರೆ ಎಂದು ಭಾರತ ಶುಕ್ರವಾರ ಖಚಿತಪಡಿಸಿದೆ.
ರಷ್ಯಾ-ಉಕ್ರೇನ್ ಸಂಘರ್ಷ ವಲಯದಲ್ಲಿ ಮತ್ತೊಬ್ಬ ಭಾರತೀಯ ಪ್ರಜೆ ಸಾವನ್ನಪ್ಪಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ರಷ್ಯಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಭಾರತೀಯ ಪ್ರಜೆಗಳನ್ನು ಬಿಡುಗಡೆ ಮಾಡುವಂತೆ ಭಾರತ ಈ ವಾರದ ಆರಂಭದಲ್ಲಿ ರಷ್ಯಾವನ್ನು ಒತ್ತಾಯಿಸಿತ್ತು.
ರಷ್ಯಾದ ಸೇನೆಯಲ್ಲಿ ಭಾರತೀಯ ಪ್ರಜೆಗಳ ಕುರಿತು ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, "16 ವ್ಯಕ್ತಿಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ರಷ್ಯಾ ಸರ್ಕಾರ ಅವರನ್ನು ಕಾಣೆಯಾದವರ ಪಟ್ಟಿಗೆ ಸೇರಿಸಿದೆ ಎಂದು ತಿಳಿಸಿದ್ದಾರೆ.
"ನಾವು ರಷ್ಯಾ ಸೇನೆಯಲ್ಲಿರುವ ಭಾರತೀಯ ಪ್ರಜೆಗಳ ಬಿಡುಗಡೆ ಮತ್ತು ವಾಪಸಾತಿಯನ್ನು ಬಯಸುತ್ತಿದ್ದೇವೆ" ಎಂದು ಜೈಸ್ವಾಲ್ ಹೇಳಿದ್ದಾರೆ.
ಇಂದಿನವರೆಗೆ ರಷ್ಯಾದ ಸೇನೆಯಲ್ಲಿ 126 ಭಾರತೀಯ ಪ್ರಜೆಗಳು ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ 96 ಮಂದಿ ಭಾರತಕ್ಕೆ ಮರಳಿದ್ದಾರೆ ಮತ್ತು ರಷ್ಯಾದ ಸಶಸ್ತ್ರ ಪಡೆಗಳಿಂದ ಬಿಡುಗಡೆಗೊಂಡಿದ್ದಾರೆ. ರಷ್ಯಾದ ಸೇನೆಯಲ್ಲಿ ಇನ್ನೂ18 ಭಾರತೀಯ ಪ್ರಜೆಗಳು ಉಳಿದಿದ್ದಾರೆ ಮತ್ತು ಅವರಲ್ಲಿ 16 ವ್ಯಕ್ತಿಗಳು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ” ಎಂದು ಜೈಸ್ವಾಲ್ ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ರಷ್ಯಾದ ಸೈನ್ಯದಲ್ಲಿ ಹೋರಾಡುತ್ತಿದ್ದ ಕೇರಳದ ತ್ರಿಶೂರ್ ನಿವಾಸಿ ಬಿನಿಲ್ ಟಿಬಿ ಸಾವನ್ನಪ್ಪಿದ ನಂತರ ಈ ಹೊಸ ಮಾಹಿತಿ ಬಂದಿದೆ. ಕೇರಳದ ಮತ್ತೊಬ್ಬ ಭಾರತೀಯ ಪ್ರಜೆ ಗಾಯಗೊಂಡು ಪ್ರಸ್ತುತ ಮಾಸ್ಕೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿನಿಲ್ ಟಿಬಿ ಅವರ ಸಾವನ್ನು ಸೋಮವಾರ ಅವರ ಸಂಬಂಧಿಕರು ದೃಢಪಡಿಸಿದ್ದಾರೆ.
“ಬಿನಿಲ್ ಬಾಬು ಅವರ ಸಾವು ಅತ್ಯಂತ ದುರದೃಷ್ಟಕರ. ನಾವು ಕುಟುಂಬಕ್ಕೆ ನಮ್ಮ ಸಂತಾಪ ಸೂಚಿಸಿದ್ದೇವೆ. ಅವರ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ತರುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ರಾಯಭಾರ ಕಚೇರಿಯು ರಷ್ಯಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಗಾಯಗೊಂಡ ಮತ್ತೊಬ್ಬ ವ್ಯಕ್ತಿ ಮಾಸ್ಕೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ... ಅವರ ಚಿಕಿತ್ಸೆ ಪೂರ್ಣಗೊಂಡ ನಂತರ ಅವರು ಶೀಘ್ರದಲ್ಲೇ ಭಾರತಕ್ಕೆ ಮರಳುತ್ತಾರೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
Advertisement