
ಕೋಲ್ಕತ್ತ: ಇಲ್ಲಿನ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದು, ಸಂತ್ರಸ್ತೆಯ ಕುಟುಂಬಕ್ಕೆ 17 ಲಕ್ಷ ರೂ. ಪರಿಹಾರ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚನೆ ನೀಡಿದೆ.
ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದ ನಂತರ ಸುದ್ದಿಸಂಸ್ಥೆ ANI ಜೊತೆ ಮಾತನಾಡಿರುವ ಸಂತ್ರಸ್ತೆಯ ಕುಟುಂಬ, 'ನಮಗೆ ಪರಿಹಾರ ಬೇಡ, ನ್ಯಾಯ ಬೇಕು' ಎಂದಿದ್ದಾರೆ.
'ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 (1) ಅಡಿಯಲ್ಲಿ ಆರೋಪಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಲಾಗಿದೆ. ಸಂತ್ರಸ್ತೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವಾಗಲೇ ಮೃತಪಟ್ಟಿರುವುದರಿಂದ ಆಕೆಯ ಕುಟುಂಬಕ್ಕೆ ಪರಿಹಾರ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ವೈದ್ಯೆಯ ಸಾವಿಗೆ 10 ಲಕ್ಷ ರೂ. ಮತ್ತು ಅತ್ಯಾಚಾರಕ್ಕೆ 7 ಲಕ್ಷ ರೂ. ಪರಿಹಾರ ನೀಡಬೇಕು' ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅನಿರ್ಬನ್ ದಾಸ್ ಹೇಳಿದರು.
ಶನಿವಾರ ಮಾತನಾಡಿದ್ದ ಸಂತ್ರಸ್ತೆಯ ತಂದೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು. ಆರೋಪಿಗೆ ತಕ್ಕ ಶಿಕ್ಷೆ ದೊರೆಯುವವರೆಗೆ ತಮ್ಮ ಹೋರಾಟ ಬೀದಿಗಳಲ್ಲಿ ಮತ್ತು ನ್ಯಾಯಾಲಯದಲ್ಲಿ ಮುಂದುವರಿಯುತ್ತದೆ. ಆರೋಪಿಗೆ ನ್ಯಾಯಾಧೀಶರು ಕಠಿಣ ಶಿಕ್ಷೆ ನೀಡುತ್ತಾರೆ. ನಮಗೆ ನ್ಯಾಯಾಧೀಶರ ಮೇಲೆ ಸಂಪೂರ್ಣ ನಂಬಿಕೆಯಿದೆ ಎಂದಿದ್ದರು.
ತನಿಖೆಯನ್ನು ಉತ್ತಮವಾಗಿ ಮಾಡಿಲ್ಲ ಮತ್ತು ಅಪರಾಧದಲ್ಲಿ ಭಾಗಿಯಾಗಿರುವ ಇತರ ಹಲವಾರು ಅಪರಾಧಿಗಳನ್ನು ರಕ್ಷಿಸಲಾಗಿದೆ. ನ್ಯಾಯಕ್ಕಾಗಿ ಉನ್ನತ ನ್ಯಾಯಾಲಯದ ಮೊರೆ ಹೋಗುವುದಾಗಿ ಸಂತ್ರಸ್ತೆಯ ಕುಟುಂಬ ತಿಳಿಸಿದೆ.
'ನಾವು ಆಘಾತಕ್ಕೊಳಗಾಗಿದ್ದೇವೆ. ಈ ಪ್ರಕರಣವು 'ಅಪರೂಪದಲ್ಲಿಯೇ ಅಪರೂಪ' ವರ್ಗಕ್ಕೆ ಏಕೆ ಸೇರುವುದಿಲ್ಲ? ಕರ್ತವ್ಯನಿರತ ವೈದ್ಯೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಮತ್ತು ಕೊಲೆ ಮಾಡಲಾಗಿದೆ. ನಾವು ದಿಗ್ಭ್ರಮೆಗೊಂಡಿದ್ದೇವೆ. ಈ ಅಪರಾಧದ ಹಿಂದೆ ದೊಡ್ಡ ಪಿತೂರಿ ಇದೆ' ಎಂದು ಸಂತ್ರಸ್ತೆ ತಾಯಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಸಂತ್ರಸ್ತೆಯ ಕುಟುಂಬದ ಪರ ವಾದಿಸಿದ್ದ ವಕೀಲರು ಎಎನ್‌ಐ ಜೊತೆ ಮಾತನಾಡಿ, 'ಅಪರಾಧಿಗೆ ಮರಣದಂಡನೆಯನ್ನು ಗರಿಷ್ಠ ಶಿಕ್ಷೆಯಾಗಿ ನೀಡುವಂತೆ ನಾನು ಬಯಸುತ್ತೇನೆ' ಎಂದು ಹೇಳಿದರು.
Advertisement