
ಮಾಲ್ಡಾ: ಬಾಂಗ್ಲಾ- ಭಾರತ ಗಡಿ ಸಮಸ್ಯೆ ಬಗೆಹರಿಸಲು ಎರಡು ದೇಶಗಳು ಮುಂದಾಗಿವೆ. ಎದುರಾಗಿರುವ ಸಮಸ್ಯೆ ಪರಿಹರಿಸಿ- ಶಾಂತಿ ಕಾಪಾಡಿಕೊಳ್ಳಲು ಹಾಗೂ ಗಡಿಯಾಚೆಗಿನ ಅಕ್ರಮ ಚಟುವಟಿಕೆಗಳನ್ನು ತಡೆಯಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಬಾಂಗ್ಲಾದೇಶ ಗಡಿ ಕಾವಲು ಪಡೆ (ಬಿಜಿಬಿ) ಸಮನ್ವಯ ಸಭೆ ನಡೆಸಲಾಯಿತು.
ಬುಧವಾರ ಬಾಂಗ್ಲಾದೇಶದ ಸೋನಾಮಾಸ್ಜಿದ್‌ನ ಗಡಿ ಹೊರಠಾಣೆ (ಬಿಒಪಿ)ಯಲ್ಲಿ ಸಭೆ ನಡೆಯಿತು. ಬಿಎಸ್‌ಎಫ್ ಮಾಲ್ಡಾ ವಲಯದ ಡಿಐಜಿ ತರುಣ್ ಕುಮಾರ್ ಗೌತಮ್ ಮತ್ತು ಬಿಜಿಬಿ ರಾಜಶಾಹಿ ವಲಯದ ಕಮಾಂಡರ್ ಕರ್ನಲ್ ಮೊಹಮ್ಮದ್ ಇಮ್ರಾನ್ ಇಬ್ನೆ ರೌಫ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವುದು, ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವುದು ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಅನಧಿಕೃತ ಚಲನೆಯನ್ನು ತಡೆಗಟ್ಟುವ ಬಗ್ಗೆ ಚರ್ಚೆಗಳು ನಡೆದವು ಎಂದು ಅದು ತಿಳಿಸಿವೆ. ಸಭೆಯಲ್ಲಿ ಮಾತುಕತೆ ಮತ್ತು ಒಮ್ಮತದ ಮೂಲಕ ಗಡಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಎರಡೂ ಕಡೆಯ ಅಧಿಕಾರಿಗಳು ಸಮ್ಮತಿಸಿದ್ದಾರೆ.
ಜನವರಿ 18 ರಂದು ಮಾಲ್ಡಾ ಜಿಲ್ಲೆಯ ಸುಖದೇವ್‌ಪುರ ಗಡಿಯಲ್ಲಿ ನಡೆದ ಇತ್ತೀಚಿನ ಘಟನೆಯನ್ನು ಸಹ ಸಭೆ ಉಲ್ಲೇಖಿಸಿದೆ. ಎರಡೂ ದೇಶಗಳ ರೈತರ ನಡುವಿನ ವಾಗ್ವಾದವು ಸಂಕ್ಷಿಪ್ತ ಘರ್ಷಣೆಗೆ ಕಾರಣವಾದ ನಂತರ ಸುಖದೇವ್‌ಪುರ ಗಡಿ ಹೊರಠಾಣೆ ಬಳಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಬಿಎಸ್‌ಎಫ್ ಮತ್ತು ಬಿಜಿಬಿಯ ತ್ವರಿತ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು.
ಈ ಉನ್ನತ ಮಟ್ಟದ ಸಭೆಗಳು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಬಲವಾದ ಪಾಲುದಾರಿಕೆಯನ್ನು ಸಂಕೇತಿಸುತ್ತವೆ ಎಂದು ಬಿಎಸ್‌ಎಫ್ ದಕ್ಷಿಣ ಬಂಗಾಳ ಗಡಿನಾಡಿನ ವಕ್ತಾರ ಎನ್ ಕೆ ಪಾಂಡೆ ಹೇಳಿದರು.
Advertisement